ಉತ್ತಮ ಆರೋಗ್ಯಕ್ಕೆ ಯೋಗ ಅಗತ್ಯ

4 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಯೋಗ ವಿದ್ಯೆ ವಿಶ್ವ ಸಂಸ್ಕೃತಿಗೆ ಭಾರತ ನೀಡಿದ ಅಮೂಲ್ಯ ಕೊಡುಗೆ. ಇದು ದೇಹ ಹಾಗೂ ಮನಸ್ಸುಗಳ ನಡುವೆ ಸಾಮರಸ್ಯ ಸಾಧಿಸುವ ನಿತ್ಯ ನೂತನ ಮಾರ್ಗವಾಗಿದೆ ಎಂದು ಯೋಗತಜ್ಞ ತಾ.ಬ. ಚವ್ಹಾಣ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ದಿನೇಶ ಪರಡ್ಡಿ ಸ್ಮರಣಾರ್ಥ ಶನಿವಾರ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಯೋಗ ಮತ್ತು ಆರೋಗ್ಯ ವಿಷಯ ಕುರಿತು ಉಪನ್ಯಾಸ ನೀಡಿದರು.
ಯೋಗ ವಿದ್ಯೆಯನ್ನು ಪ್ರಥಮ ಬಾರಿ ಸೂತ್ರ ರೂಪದಲ್ಲಿ ಲಭ್ಯವಾಗುವಂತೆ ಮಾಡಿದ ಕೀರ್ತಿ ಯೋಗ ಪಿತಾಮಹ ಪತಂಜಲಿ ಮಹರ್ಷಿಗಳಿಗೆ ಸಲ್ಲುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಪತಂಜಲಿಯ ಅಷ್ಟಾಂಗ ಸೂತ್ರಗಳು ಮನಸ್ಸನ್ನು ಸಂಸ್ಕಾರಗೊಳಿಸಬಲ್ಲವು. ಆರೋಗ್ಯ ಎಂದರೆ ದೈಹಿಕ. ಬರೀ ದೈಹಿಕ ರೋಗದಿಂದ ಮುಕ್ತವಾಗುವುದಲ್ಲ. ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಬೌದ್ಧಿಕವಾಗಿ ಉತ್ತಮವಾಗಿರುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಕಿರಣ ಕುಲಕರ್ಣಿ ಮಾತನಾಡಿ, ಯೋಗ ವಿದ್ಯೆಯು ನಮ್ಮ ಜೀವನದ ಒಂದು ವಿಧಾನ. ಇಂದಿನ ಒತ್ತಡ ಜೀವನದಲ್ಲಿ ದೇಹ, ಮನಸ್ಸು ಹಾಗೂ ಆತ್ಮಗಳ ನಡುವೆ ಸಮತೋಲನ ಸಾಧಿಸುವುದಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮನುಷ್ಯನಿಗೆ ಬರುವ ಅನೇಕ ಭೀಕರ ಕಾಯಿಲೆಗೆ ಪರಿಹಾರವಾಗಬಲ್ಲದು. ಯೋಗದಿಂದ ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದರು.
ಅನಿಲ ಪರಡ್ಡಿ, ಎಂ.ಕೆ. ಅಂಗಡಿ, ಶೇಷರಾಜ ಗುತ್ತಲ, ಅಭಿಷೇಕ ದೇಸಾಯಿ, ಆರ್.ವಿ. ಪಾಟೀಲ, ಇತರರು ಇದ್ದರು. ಗುರು ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಶ್ರೀಶೈಲ ಹುದ್ದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net