

ಚಿತ್ರದುರ್ಗ: ಮಾನವರ ಅಸ್ತಿತ್ವ, ಸುಸ್ಥಿರತೆಯು ಪ್ರಾಕೃತಿಕ ಸಂಪತ್ತಿನ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಪ್ರೇಮಿಯಾಗಿ ಗಿಡ-ಮರಗಳನ್ನು ಬೆಳೆಸಿದಾಗ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಡಿಡಿಪಿಐ ಮಂಜುನಾಥ್ ಸಲಹೆ ನೀಡಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಮುರುಘಾಮಠ, ಎಸ್‌ಜೆಎಂ ಫಾರ್ಮಸಿ ಕಾಲೇಜು, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆಯಿಂದ ಭಾನುವಾರ ಸೀಬಾರದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಸಪ್ತಾಹದ ಮೂರನೇ ದಿನವಾದ ಭಾನುವಾರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನದತ್ತ ವಾಲಿರುವ ಮಾನವರ ಬದುಕು, ಚಟುವಟಿಕೆಗಳು ಅತ್ಯಂತ ಸಂಕೀರ್ಣಗೊಂಡಿವೆ. ಅರಣ್ಯ ನಾಶ, ಅಧಿಕ ಜನಸಂಖ್ಯೆ, ಅಸಮರ್ಪಕ ಘನ ತ್ಯಾಜ್ಯ, ವಾಯುಮಾಲಿನ್ಯ ಸೇರಿ ಇನ್ನಿತರೆ ಕಾರಣಗಳಿಂದ ಪರಿಸರ ಅವಸಾನದತ್ತ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಕಲ ಜೀವರಾಶಿಗಳು ಜೀವಿಸಲು ಬೇಕಾದ ಸವಲತ್ತುಗಳನ್ನು ಪರಿಸರ ನಮಗೆ ನೀಡಿದೆ. ಆದ್ದರಿಂದ ನಿಸರ್ಗವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಪರಿಸರದ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಸಾಮಾಜಿಕ ಹೊಣೆಗಾರಿಕೆ ಸೇರಿ ವಿವಿಧ ಕಾರ್ಯಗಳನ್ನು ಶ್ರೀಮಠ ಮಾಡುತ್ತ ಬಂದಿದೆ. ಕಳೆದ ವರ್ಷ ನೆಟ್ಟ ಸಸಿಗಳು ಇಂದು ಮರಗಳಾಗಿ ಬೆಳೆದಿವೆ. ಸೀಬಾರದ ಬಳಿ 40ಕ್ಕೂ ಅಧಿಕ ನಿರಾಶ್ರಿತ ಕುಟುಂಬಗಳಿವೆ. ಅವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಭೂಮಿಯೇ ಸುಂದರ ಪರಿಸರ: ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಭೂಮಿಯೇ ಸುಂದರ ಪರಿಸರವಾಗಿದ್ದು, ಅದಿಲ್ಲದೆ ಜೀವಿಸಲು ಖಂಡಿತ ಸಾಧ್ಯವಿಲ್ಲ. ಒಂದು ವೇಳೆ ಅಸಮತೋಲನ ಉಂಟಾದರೆ, ಜೀವ ಸಂಕುಲಕ್ಕೆ ಕುತ್ತಾಗಲಿದೆ ಎಂದು ಎಚ್ಚರಿಸಿದರು.
ಅತ್ಯಮೂಲ್ಯವಾದ ಪ್ರಾಕೃತಿಕ ಸಂಪತ್ತಿನ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಗಿಡಗಳನ್ನು ಬೆಳೆಸಿ, ನೈರ್ಮಲ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.
ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಮಾತನಾಡಿ, ನಿತ್ಯ ಕಾಯಕದ ಜತೆ ಪರಿಸರ ಸಂರಕ್ಷಣೆಗೂ ಗಮನ ಹರಿಸಬೇಕು. ನಿಸರ್ಗದ ಒಟ್ಟಿಗೆ ಕೂಡಿ ಬಾಳಿದರೆ ಬಾಳು ಬಂಗಾರವಾಗಲಿದೆ. ಮರಗಳನ್ನು ಕಡಿಯುವ ಪ್ರಮಾಣ ಕಡಿಮೆ ಆಗಬೇಕು ಎಂದು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತೆ ಎಂ. ರೇಣುಕಾ ಮಾತನಾಡಿ, ಪರಿಸರ ಸಂರಕ್ಷಣೆಗೆ ಒತ್ತು ನೀಡಿರುವ ಶ್ರೀಮಠಕ್ಕೆ ನಗರಸಭೆ ಅಗತ್ಯ ಸಹಕಾರ ನೀಡಲಿದೆ. ಮಾನವ ಪರಿಸರದ ಕೂಸು. ಆತನ ಹಸ್ತಕ್ಷೇಪದಿಂದಾಗಿ ಪರಿಸರ ವ್ಯಾಪಕವಾಗಿ ಹಾನಿಗೀಡಾಗಿದೆ. ಅದನ್ನು ತಡೆಯುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ ಅರಣ್ಯಾಧಿಕಾರಿಗಳಾದ ರಾಮದಾಸ್ ಚೌಹಾಣ್, ಪ್ರಭು, ಚಾಂದ್ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಪ್ರಾಚಾರ್ಯ ನಾಗರಾಜ್, ನಾಗರಾಜ್ ಸಂಗಂ, ಉಮೇಶ್ ಪತ್ತಾರ್, ಅಶ್ವಿನಿ, ಡಾ. ಬಸವರಾಜ್ ಇತರರಿದ್ದರು.