

ವಿಜಯವಾಣಿ ಸುದ್ದಿಜಾಲ ಆನೇಕಲ್
ಸರ್ಕಾರದ ಮಟ್ಟದಲ್ಲಿ ಮಾಡಲಾಗದ ಕೆಲಸಗಳನ್ನು ಹೆನ್ನಾಗರ ಗ್ರಾಪಂ ಮಾಡಿ ತೋರಿಸುವ ಮೂಲಕ ಮಾದರಿ ಗ್ರಾಪಂ ಎನಿಸಿದೆ ಎಂದು ಸಂಸದ ಡಿ.ಕೆ ಸುರೇಶ್ ಸಂತಸ ವ್ಯಕ್ತಪಡಿಸಿದರು.
ಹೆನ್ನಾಗರ ಗ್ರಾಪಂನಿಂದ ಶನಿವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧೀಜಿ ಅವರ ಕನಸು ನನಸು ಮಾಡುವ ಕೆಲಸವನ್ನು ಪಂಚಾಯಿತಿ ಮಾಡಿದೆ. ಈ ಮೂಲಕ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ಹೆಮ್ಮೆಯ ವಿಷಯ. ಹಾಗೆಯೇ ಭಾರತ ಸರ್ಕಾರ ನೀಡುವ ಮಕ್ಕಳ ಸ್ನೇಹಿ ಪಂಚಾಯಿತಿ ಪ್ರಶಸ್ತಿಯನ್ನೂ ಪಡೆದಿರುವುದು ಮಾದರಿ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರು. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಪುತ್ಥಳಿಯನ್ನು ಗ್ರಾಪಂ ಆವರಣದಲ್ಲಿ ಅನಾವರಣ ಮಾಡಿದ್ದು, ಈ ಮೂವರು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಡೆದು ಸಾಧಿಸಿ ತೋರಿಸಿದವರು. ಪ್ರತಿದಿನ ಮಹನೀಯರ ಪುತ್ಥಳಿ ನಮ್ಮ ಕಣ್ಣೆದುರು ಬರಲಿದ್ದು, ಪಂಚಾಯಿತಿ ಪ್ರತಿನಿಧಿಗಳಿಗೂ ಉತ್ತಮ ಕೆಲಸಕ್ಕೆ ಇದು ಪ್ರೇರಕವಾಗಲಿದೆ ಎಂದರು.
ಪಾರ್ಲಿಮೆಂಟ್‌ನಲ್ಲಿ ಕುಳಿತು ಆಡಳಿತ ಸುಧಾರಣೆಗೆ ಕಾನೂನು ಜಾರಿಗೆ ತರಬಹುದು. ಆದರೆ ನಿಜವಾದ ಅನುಷ್ಠಾನಕ್ಕೆ ತಂದು ಅಭಿವೃದ್ಧಿ ಕಾಣಲು ಗ್ರಾಪಂ ಆಡಳಿತ ವ್ಯವಸ್ಥೆಯಿಂದ ಮಾತ್ರ ಸಾಧ್ಯ ಎಂದರು.
ನೀರು ನೀಡದ ಸರ್ಕಾರ: ತಾಲೂಕಿಗೆ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ 64 ಕೋಟಿ ರೂ.ಕೊಟ್ಟಿತ್ತು. ಆದರೆ ಬಿಜೆಪಿ ಸರ್ಕಾರ ಇಬ್ಬಗೆಯ ನೀತಿಯಿಂದ ಅನುದಾನಕ್ಕೆ ತೊಡಕಾಗಿದೆ ಎಂದು ಸಂಸದರು ಬೇಸರಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಜನಪರ ಕೆಲಸ ಆಗಲು ಸಾಧ್ಯ. ಅಂತೆಯೇ ಆನೇಕಲ್ ತಾಲೂಕಿಗೆ ನನ್ನ ಆಡಳಿತ ಅವಧಿಯಲ್ಲಿ ಆರ್‌ಟಿಒ ಕಚೇರಿ ಸೇರಿ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೂರು ತಿಂಗಳಲ್ಲಿ ಕಾವೇರಿ ಕುಡಿಯುವ ನೀರನ್ನು ಈ ಭಾಗಕ್ಕೆ ನೀಡಲಾಗುವುದು ಎಂದರು.
ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಪಂಚಾಯಿತಿ ಉದ್ಯಾನದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಪುತ್ಥಳಿ ಅನಾವರಣ, ಗ್ರಾಪಂನ ಎಲ್ಲ ಗ್ರಾಮದ ಎಸ್‌ಸಿ, ಎಸ್‌ಟಿಯ ಹಲವು ಕುಟುಂಬಗಳಿಗೆ ಹಸುಗಳ ವಿತರಣೆ, 104 ಎಲ್ಪಿಜಿ ಸಿಲಿಂಡರ್, 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, 8 ಹಳ್ಳಿಗಳಿಗೆ ತಲಾ ಒಂದು ಲಕ್ಷ ರೂ. ಕ್ರೀಡಾ ಸಾಮಗ್ರಿ ವಿತರಣೆ, 10 ತ್ರಿಚಕ್ರವಾಹನ, ಕರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಧನಸಹಾಯ, ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲೇ ಅತಿ ಹೆಚ್ಚು ಜನರಿಗೆ ಖರೀದಿ ಮಾಡಿ ಲಸಿಕೆ ನೀಡಿದ್ದೇವೆ. ಹಾಗೆಯೇ ಸ್ತ್ರೀಶಕ್ತಿ ಸಂಘಗಳಿಗೆ ನೆರವು, ಆರೋಗ್ಯ ಶಿಬಿರ, ಪರಿಸರ ಕಾಪಾಡಲು ಆದ್ಯತೆ ನೀಡಲಾಗಿದೆ ಎಂದರು.
ಸದಸ್ಯರಾದ ಕೆ.ವಿ. ರಾಮಸ್ವಾಮಿ, ಲೋಕನಾಥ, ಶಿವರಾಜು, ಎಂ ಕೃಷ್ಣಪ್ಪ, ಅನಿತಮ್ಮ, ಲಲಿತಾ ಗುರುದೇವ್, ಸತೀಶ್, ಮನು, ಮಹೇಶ್, ಕಾಂತರಾಜ್, ವಿನಯ್, ಮುಖಂಡರಾದ ಕೆ.ಎಸ್. ನಟರಾಜು, ಹಾಪ್‌ಕಾಮ್ ಮಾಜಿ ಅಧ್ಯಕ್ಷ ಬಾಬುರೆಡ್ಡಿ, ಹೋರಾಟಗಾರ ಜಿಗಣಿ ಶಂಕರ್ ಹಾಜರಿದ್ದರು.
ಅಂಬೇಡ್ಕರ್ ಭವನ, ಹೊಸ ಶಾಲಾ ಕಟ್ಟಡ, ರಾಜ್ಯದಲ್ಲಿಯೇ ಉತ್ತಮ ಪಂಚಾಯಿತಿ ಕಟ್ಟಡ ನಿರ್ಮಾಣ ಹಾಗೂ ಸಾಮಾನ್ಯ ಸೇವಾ ಕೇಂದ್ರ ಸ್ಥಾಪಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಜನರಿಗೆ ದೊರಕಿಸಿಕೊಡಲಾಗಿದೆ. ಈ ಸಾಧನೆಗೆ ರಾಷ್ಟ್ರಮಟ್ಟದಲ್ಲಿ ಹಲವು ಪುರಸ್ಕಾರ ಪಂಚಾಯಿತಿಗೆ ಸಂದಿದೆ.
ಆರ್.ಕೆ.ಕೇಶವರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ