

ಹಾಸನ: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಆರೋಗ್ಯಕರ ಅಭ್ಯಾಸ ಮೈಗೂಡಿಸಿಕೊಂಡು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಮಾರಣಾಂತಿಕ ಖಾಯಿಲೆಯಿಂದ ದೂರವಿರಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಎನ್.ಸಿ.ಡಿ ಕಾರ್ಯಕ್ರಮದ ಮುಖ್ಯಸ್ಥ ಡಾ.ಕೆ.ಬಿ. ಶಿವಶಂಕರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಹಿಮ್ಸ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ಇತ್ತೀಚೆಗೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಹಾಸ್ಪೈಸ್ ಮತ್ತು ಉಪಶಮನ ಆರೈಕೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು ಎಂಬ ಆಸೆ ಇರುತ್ತದೆ, ಆದ್ದರಿಂದ ಯಾವುದೇ ರೋಗ ಇದ್ದರು ರೋಗಿಯನ್ನು ತಾತ್ಸರ ಮಾಡದೇ ಪ್ರೀತಿ ವಿಶ್ವಾಸದಿಂದ ಆರೈಕೆ ಮಾಡಬೇಕು ಆಗ ಮಾತ್ರ ರೋಗಿಗಳ ಮನಸ್ಸಿನಲ್ಲಿ ನಾನು ಬದುಕಬೇಕು ಎಂಬ ಆತ್ಮಸ್ಥೈರ್ಯ ಬರುತ್ತದೆ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಚಾಲಕ ಡಾ ಬಿ. ಸುಧೀರ್ ಮಾತನಾಡಿ, ಕಳೆದ 5 ವರ್ಷಗಳಿಂದ ತಾಲ್ಲೂಕಿನಲ್ಲಿ ಕ್ಯಾನ್ಸರ್ ಮತ್ತು ಇನ್ನಿತರೇ ಮಾರಣಾಂತಿಕ ಮತ್ತು ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಹಿಮ್ಸ್ ಆಸ್ಪತೆಯ ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧಾ ಮಾತನಾಡಿ, ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದ್ದು, ಯಾರಿಗಾದರೂ ದೇಹದಲ್ಲಿ ಕ್ಯಾನ್ಸರ್ ರೋಗ ಲಕ್ಷಣ ಕಂಡು ಬಂದರೆ ಕೂಡಲೆ ತಜ್ಞ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದರು. ಮಹಿಳೆಯರಲ್ಲಿ ಕಂಡು ಬರುವ ವಿವಿಧ ಕ್ಯಾನ್ಸರ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಜಾಗೃತಿ ಮೂಡಿಸಿದರು.
ಹಿಮ್ಸ್ ಆಸ್ಪತೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರವಿಕಿರಣ್ ಮಾತನಾಡಿ, ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಬಡ ರೋಗಿಗಳು ಕೂಡ ಆಯುಷ್ಮಾನ್ ಮತ್ತು ಆರೋಗ್ಯ ಕರ್ನಾಟಕ ಕಾರ್ಡ್ ಪಡೆದು ಉಚಿತವಾಗಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಬಹುದು, ಯಾರು ಕೂಡ ಚಿಕಿತ್ಸೆಗೆ ಭಯಪಡುವ ಅವಶ್ಯಕತೆ ಇಲ್ಲ ಇದರ ಬಗ್ಗೆ ವಿದ್ಯಾರ್ಥಿಗಳು ತಮ್ಮ ಹಳ್ಳಿಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು ಕ್ಯಾನ್ಸರ್‌ಗೆ ಇರುವ ವಿವಿಧ ಚಿಕಿತ್ಸೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಂಶುಪಾಲ ಡಾ. ಕೆ.ಜಿ. ಕವಿತ ವಹಿಸಿದ್ದರು. ಈ ಸಂದರ್ಭದಲ್ಲಿ ಹಿಮ್ಸ್ ಆಸ್ಪತೆಯ ಔಷದ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ದೀಪಕ್, ಸಹಾಯಕ ಪ್ರಾಧ್ಯಾಪಕರು ಡಿ.ಜಿ.ರಮ್ಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ ಮತ್ತು ಮಂಜುಳ, ಡಾ ಬಿ.ನಿಧಿ, ಡಾ.ಪಿ.ಲಾಸ್ಯ, ಡಾ ವೈಷ್ಣವಿ ಹಾಗೂ ಸಿಬ್ಬಂದಿಗಳು ಮತ್ತು ಕಾಲೇಜು ಸಿಬ್ಬಂದಿ ಇದ್ದರು.