ಉತ್ತಮ ಅಂಕ ಗಳಿಸಿ ಗೌರವಕ್ಕೆ ಪಾತ್ರರಾಗಿ

hnp 17623
Published on

ಹೊಳೆನರಸೀಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮವಾಗಿ ವಿದ್ಯೆ ಕಲಿತವರಿಗೆ ಹೆಚ್ಚಿನ ಅವಕಾಶ ಹಾಗೂ ಗೌರವ ಸಿಗುತ್ತದೆ. ಭವಿಷ್ಯದಲ್ಲಿಯೂ ಅತ್ಯುತ್ತಮ ಅಂಕ ಗಳಿಸಿ ಉತ್ತೀರ್ಣರಾಗಿ ಅಂತಹ ಗೌರವಕ್ಕೆ ಪಾತ್ರರಾಗಿ ಎಂದು ವಿದ್ಯಾರ್ಥಿಗಳಿಗೆ ಹಳ್ಳಿಮೈಸೂರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಪ್ರಭುಶಂಕರ್ ಸಲಹೆ ನೀಡಿದರು.


ಸೋಷಿಯಲ್ ಕ್ಲಬ್ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಹಾಗೂ ಪರಿಸರ ನಮಗೆ ಎಲ್ಲವನ್ನೂ ಕೊಡುತ್ತದೆ. ಸಮಾಜದಿಂದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವ ನಾವು ಸಮಾಜಕ್ಕೂ ಸೇವೆ ಸಲ್ಲಿಸಬೇಕು. ಕೆಲವರು ಸಮಾಜ ಕೆಟ್ಟು ಹೋಯಿತು ಎನ್ನುತ್ತಾರೆ. ಆದರೆ ಸಮಾಜ ಕೆಟ್ಟಿಲ್ಲ, ಕೆಡುವುದೂ ಇಲ್ಲ. ಕೆಟ್ಟಿರುವವರು ಜನರು ಮಾತ್ರ. ಆದ್ದರಿಂದ ಒಳ್ಳೆಯ ದಾರಿಯಲ್ಲಿ ನಡೆದು ಉತ್ತಮ ಬದುಕು ರೂಪಿಸಿಕೊಳ್ಳುವಂತೆ ತಿಳಿಸಿದರು.


ನಗರಠಾಣೆ ಎಸ್.ಐ. ಅರುಣ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರೀತಿ, ಪ್ರೇಮ ಎಂದು ತಲೆಕೆಡಿಸಿಕೊಂಡು ಬದುಕನ್ನು ಹಾಳು ಮಾಡಿಕೊಂಡಿರುವ ಅನೇಕ ಪ್ರಕರಣಗಳು ನಮ್ಮ ಮುಂದಿದೆ. ಮೊದಲು ನೀವು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ನಿಮ್ಮ ಬದುಕನ್ನು ನೀವೇ ರೂಪಿಸಿಕೊಂಡ ನಂತರ ಪ್ರೀತಿ, ಪ್ರೇಮದ ಬಗ್ಗೆ ಯೋಚನೆ ಮಾಡಿ. ಇಲ್ಲ ಈ ಜವಾಬ್ದಾರಿಯನ್ನು ನಿಮ್ಮ ಪಾಲಕರಿಗೆ ನೀಡಿ, ನೀವು ಉನ್ನತ ವ್ಯಾಸಂಗದ ಬಗ್ಗೆ ಗಮನ ನೀಡಿ ಎಂದು ಕಿವಿಮಾತು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಸೋಷಿಯಲ್ ಕ್ಲಬ್ ಅಧ್ಯಕ್ಷ ಪದ್ಮರಾಜು, ಕೆ.ಎಂ. ಶೇಷಣ್ಣ, ಸದಸ್ಯರಾದ ವೆಂಕಟೇಶ್, ಜಗದೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net