

ಹನೂರು: ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂಬ ನಿಟ್ಟಿನಲ್ಲಿ ತಾಲೂಕಿನ ಗಡಿಗ್ರಾಮ ಕೂಡಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಇಒ ಶಿವರಾಜು ಮಂಗಳವಾರ ವಾಸ್ತವ್ಯ ಹೂಡಿದ್ದು, ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಇದಕ್ಕೂ ಮುನ್ನ ಬಿಇಒ ಕೂಡಲೂರು, ಹೂಗ್ಯಂ, ಜಲ್ಲಿಪಾಳ್ಯ, ದಮ್ಮೇಗೌಡನ ದೊಡ್ಡಿ, ಪೆದ್ದನಪಾಳ್ಯ, ನೆಲ್ಲೂರು ಹಾಗೂ ಯರಂಬಾಡಿ ಗ್ರಾಮಕ್ಕೆ ಶಾಲಾ ಶಿಕ್ಷಕರೊಂದಿಗೆ ಭೇಟಿ ನೀಡಿದ್ದರು. ಈ ಮಧ್ಯೆ ಪಾಲಕರ ಸಭೆ ಆಯೋಜಿಸಿ ಅವರಿಂದ ಮಾಹಿತಿ ಪಡೆದರು. ಮಕ್ಕಳ ಓದಿಗೆ ಹೆಚ್ಚಿನ ಪ್ರೇರಣೆ ನೀಡುವ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರಲ್ಲದೆ, ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸಿದರು.
ಯಾವುದೇ ಕಾರಣಕ್ಕೂ ಭಯ ಪಡಬಾರದು. ಈಗಿನಿಂದಲೇ ವಿಷಯವಾರು ವೇಳಾ ಪಟ್ಟಿ ತಯಾರಿಸಿಕೊಂಡು ಓದಿನ ಜತೆಗೆ ಹೆಚ್ಚು ಬರೆಯುವುದನ್ನು ರೂಢಿಸಿಕೊಳ್ಳಬೇಕು. ವಿಷಯ ಸಂಬಂಧಿತ ಸಮಸ್ಯೆ ಇದ್ದಲ್ಲಿ ಆಯಾ ಶಿಕ್ಷಕರಿಂದ ಪರಿಹಾರ ಕಂಡುಕೊಳ್ಳಬೇಕು. ತರಗತಿಯಲ್ಲಿ ನಡೆದ ಬೋಧನೆಯನ್ನು ಆಯಾ ದಿನವೇ ಅಭ್ಯಸಿಸಬೇಕು. ವಿನಾಕಾರಣ ಶಾಲೆಗೆ ಗೈರಾಗಬಾರದು ಎಂದು ಬಿಇಒ ಸಲಹೆ ನೀಡಿದರು.
ಪಠ್ಯ ವಿಷಯವನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಶಾಲೆಯಲ್ಲಿ ಗುಂಪು ಅಧ್ಯಯನ, ವಿಶೇಷ ತರಗತಿ ಕೈಗೊಳ್ಳಬೇಕು. ಬುದ್ಧಿಶಕ್ತಿ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಪರೀಕ್ಷೆಯಲ್ಲಿ ಅನುಸರಿಸುವ ಸರಳ ತಂತ್ರಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.
ಶಿಕ್ಷಣ ಸಂಯೋಜಕ ಕಂದವೇಲು, ಮುಖ್ಯ ಶಿಕ್ಷಕರಾದ ಬಸವರಾಜು, ನಾಗರಾಜು, ಶಿವಮಲ್ಲು ಹಾಗೂ ಶಿಕ್ಷಕರು ಇದ್ದರು.