ಉತ್ತಂಬಳ್ಳಿಯಲ್ಲಿ ಸಿದ್ದಪ್ಪಾಜಿ ಕೊಂಡೋತ್ಸವ

31kglphoto8...
Published on

ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಶುಕ್ರವಾರ ನೂರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.
ಗುರುವಾರ ರಾತ್ರಿ ಗ್ರಾಮದ ಮಧ್ಯಭಾಗದಲ್ಲಿ ಸಿದ್ಧಪಡಿಸಿದ್ದ ಕೊಂಡಕ್ಕೆ ಭಕ್ತರ ಸಮ್ಮುಖದಲ್ಲಿ ಕಂಡಾಯಗಳು, ಸತ್ತಿಗೆ-ಸುರಪಾನಿ, ಜಾಗಟೆ-ತಮಟೆ, ನಗಾರಿ ಮಂಗಳ ವಾದ್ಯಗಳ ಹಿಮ್ಮೇಳ ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಡನೆ ಅಗ್ನಿ ಸ್ಪರ್ಶ ಮಾಡಲಾಯಿತು. ರಾತ್ರಿಯಿಡೀ ಉರಿದ ಸೌದೆಯ ರಾಶಿ ಬೆಳ್ಳಂಬೆಳಗ್ಗೆ ನಿಗಿ-ನಿಗಿ ಕೆಂಡದ ರಾಶಿಯಾಗಿತ್ತು. ಶುಕ್ರವಾರ ಮುಂಜಾನೆಯೇ ಕುರುಬನ ಕಟ್ಟೆ ಮಠದಿಂದ ಕಂಡಾಯಗಳನ್ನು ಹೊತ್ತು ತಂದಿದ್ದ ಶ್ರೀಮಠದ ಸೋಮಣ್ಣ, ಮಹಾಲಿಂಗ, ಜಡೆ ರೇಚಣ್ಣ, ಮರಿಸ್ವಾಮಿ, ನಿಂಗರಾಜು, ಕುಮಾರ, ಪುಟ್ಟನಿಂಗ, ಗಿರಿ ಹಾಗೂ ಮಹಾದೇವ ಅವರು ಗ್ರಾಮದ ಹೊರ ವಲಯದಲ್ಲಿರುವ ಪಂಪ್‌ಹೌಸ್ ಬಳಿ ತೆರಳಿ ಕಂಡಾಯಗಳನ್ನು ಶುಚಿಗೊಳಿಸಿದರು. ಬಳಿಕ ಹೂವು ಹೊಂಬಾಳೆಯಿಂದ ಅಲಂಕಾರ ಮಾಡಿ ಮಂಗಳ ವಾದ್ಯ ಸಮೇತ ಕಂಡಾಯಗಳನ್ನು ಹೊತ್ತು ತಂದು ಕೊಂಡ (ಕೆಂಡ) ಹಾಯ್ದರು. ಇದಕ್ಕೂ ಮುನ್ನ ಗ್ರಾಮದ ಬೀದಿಗಳಲ್ಲಿ ಶ್ರೀ ಸ್ವಾಮಿಯ ಕಂಡಾಯಗಳನ್ನು ಹೊತ್ತು ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯಲ್ಲೂ ಭಕ್ತರು ಕಂಡಾಯಗಳಿಗೆ ಹೂವು-ಹಣ್ಣು ಕಾಯಿ ಸಮೇತ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು. ಕೊಂಡೋತ್ಸವ ಅಂಗವಾಗಿ ಗ್ರಾಮವನ್ನು ದೀಪಾಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net