ಉಣಕಲ್ಲ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

h16-Chiguru 4
Published on

ಹುಬ್ಬಳ್ಳಿ: ಯೂಥ್ ಫಾರ್ ಸೇವಾ (ವೈಎಫ್​ಎಸ್) ಹುಬ್ಬಳ್ಳಿ ಘಟಕವು ಕೆಎಲ್​ಇ ಸಂಸ್ಥೆ ಸಹಕಾರ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ, ವಿಜಯವಾಣಿ ಪತ್ರಿಕೆ ಮಾಧ್ಯಮ ಸಹಯೋಗದಲ್ಲಿ ಭಾನುವಾರ ನಗರದ ಎಂ.ಆರ್. ಸಾಖರೆ ಶಾಲೆ ಮೈದಾನದಲ್ಲಿ ಏರ್ಪಡಿಸಿದ್ದ ಚಿಗುರು ಚಿಣ್ಣರ ಮೇಳದಲ್ಲಿ ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು.

ಹುಬ್ಬಳ್ಳಿಯ ಸುಮಾರು 30ಕ್ಕೂ ಹೆಚ್ಚು ಶಾಲೆಗಳ 1047 ಮಕ್ಕಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು, ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ರಸಪ್ರಶ್ನೆ, ರಂಗೋಲಿ, ಯೋಗ, ಕಿರುನಾಟಕ, ಸಮೂಹ ನೃತ್ಯ, ಮಿದುಳಿನ ಕಸರತ್ತು, ಚಿತ್ರ ಅಂಟಿಸುವ ಕಲೆ, ಕಂಪ್ಯೂಟರ್ ಬಳಕೆ, ಚೀಟಿ ಎತ್ತಿ ಭಾಷಣ, ಬ್ಯಾಡ್ಮಿಂಟನ್, ಗೀತ, ಶ್ಲೋಕ ಪಠಣ, ಕಸದಿಂದ ರಸ, ಬೆಂಕಿ ಇಲ್ಲದ ಅಡುಗೆ, ವೇಷಭೂಷಣ, ಗೋಣಿಚೀಲದ ಓಟ, ಗಡಿಗೆ ಮೇಲೆ ಚಿತ್ರ, ಚೆಸ್, ಛೋಟಾ ಸೈಂಟಿಸ್ಟ್, ಮಣ್ಣಿನ ಮಾದರಿ, ಸಮೂಹ ಗಾಯನ ಮುಂತಾದ ಸ್ಪರ್ಧೆಗಳು ನಡೆದವು.

ವಿದ್ಯಾ ಹುಬಳೀಕರ, ಡಾ. ಶೋಭಾ ನಾಡಗೀರ, ಭಾರತಿ ಗಾಯಕವಾಡ, ಪ್ರಕಾಶ ಚಿತ್ರಗಾರ, ಮಂಜುನಾಥ ಭಾವಿಕಟ್ಟಿ, ಇಂದಿರಾ ಕುಲಕರ್ಣಿ, ಮುತ್ತಪ್ಪ ಸವಣೂರ, ಡಾ. ರಚನಾ ನಾಡಗೇರ, ಪ್ರತಿಮಾ ಜೋಶಿ, ನಾಗರಾಜ ರಾಯ್ಕರ, ಸಂಧ್ಯಾ ಮೋದಿ, ಜ್ಯೋತಿ ನಡಕಟ್ಟಿ, ನೇಹಾ ಅಗರವಾಲ್ ಸೇರಿ ಸುಮಾರು 45 ಜನ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಪ್ರತಿಯೊಂದು ಆಟದಲ್ಲಿ ತಲಾ ಮೂರು ಬಹುಮಾನ ಘೋಷಣೆ ಮಾಡಿದರು.

ಬೆಳಗ್ಗೆಯಿಂದ ಸಂಜೆಯವರೆಗೆ ವೈಎಫ್​ಎಸ್​ನ (13 ಕಾಲೇಜಿನ) 400 ಸ್ವಯಂ ಸೇವಕರು ವ್ಯವಸ್ಥಿತವಾಗಿ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಸಂಘಟನೆಗೆ ಶ್ರಮಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ, ಡಾ. ಕೆ.ಎಫ್. ಕಮ್ಮಾರ, ಎಲ್​ಐಸಿ ಅಧಿಕಾರಿ ಅರುಣ ವೈದ್ಯ, ಉಮೇಶ ವಿಭೂತೆ, ಡಾ. ಸುನೀಲ ಗೋಖಲೆ, ಜಿ.ಎಲ್. ಸತ್ಯನ್ನವರ, ಇತರರು ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.

ಸಲಹಾ ಸಮಿತಿ ಸದಸ್ಯರಾದ ವಿಠ್ಠಲ ಖಟಾವಕರ, ಮಾಧುರಿ ಖಟಾವಕರ, ವೀಣಾ ಭಟ್ಟ, ಸುರೇಶ ಸರದೇಶಪಾಂಡೆ, ಜಗನ್ನಾಥ ಜರತಾರಘರ, ಲಕ್ಷ್ಮಣ ಪೂಜಾರಿ, ಮಲ್ಲಿಕಾರ್ಜುನ, ಮಧುಸೂದನ ಇತರರು ಮೇಳದಲ್ಲಿ ಭಾಗವಹಿಸಿದ್ದರು. ಉಣಕಲ್ಲ ಚಿಕ್ಕಮಠ ಶಾಲೆ ಚಿಗುರು ಚಿಣ್ಣರ ಮೇಳದ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

ಉದ್ಘಾಟನೆ: ಚಿಗುರು ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡೆಗಳನ್ನು ಡಿಡಿಪಿಐ ಮೋಹನ ಹಂಚಾಟೆ ಉದ್ಘಾಟಿಸಿದರು. ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ, ನವ್ಯಾ ಬಯೋಲಾಜಿಕಲ್ ಕಂಪನಿ ಸಂಸ್ಥಾಪಕ ವಿನಯ ಕೊಣಾಜೆ, ನಾಗರಾಜ ನಡಕಟ್ಟಿ, ಸಂದೀಪ ಬೂದಿಹಾಳ, ವೈಎಫ್​ಎಸ್ ಮತ್ತು ದಿಯಾ ಫೌಂಡೇಷನ್ ಟ್ರಸ್ಟಿ ಹರೀಶ ಶೆಣೈ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೆಎಲ್​ಇ ಟೆಕ್ ಡೀನ್ ಡಾ. ಸಂಜಯ ಕೊಟಬಾಗಿ ಅಧ್ಯಕ್ಷತೆ ವಹಿಸಿದ್ದರು.

ನಗೆಯುಕ್ಕಿಸಿದ ಮಕ್ಕಳು: ನಗರದ ವಿಶ್ವಧರ್ಮ ಅಂಧ ಮಕ್ಕಳ ಶಾಲೆ, ಮನೋವಿಕಾಸ ಶಾಲೆ ಮಕ್ಕಳೂ ಸೇರಿ ವಿವಿಧ ಶಾಲೆಯ ಮಕ್ಕಳು ಉತ್ಸಾಹದಿಂದ ರಂಗೋಲಿ ಬಿಡಿಸಿದರು, ಯೋಗ ಮಾಡಿದರು, ಸಮೂಹ ಗಾಯನ ಪ್ರಸ್ತುತಪಡಿಸಿದರು, ನೃತ್ಯ ಮಾಡಿ ರಂಜಿಸಿದರು. ಗೋಣಿ ಚೀಲದ ಓಟವಂತೂ ಎಲ್ಲರಲ್ಲೂ ನಗೆಯುಕ್ಕಿಸಿತು. ಹಲವು ಸ್ಪರ್ಧೆಗಳಿಗೆ ತೀರ್ಪಗಾರರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net