ಉಣಕಲ್ ಕೆರೆಗೇಕಿಲ್ಲ ಚನ್ನಬಸವನ ಹೆಸರು

h14-Unkal Temple 2
Published on

ಹುಬ್ಬಳ್ಳಿ: ನಗರದ ಉಣಕಲ್ ಕೆರೆಗೆ ‘ಚನ್ನಬಸವ ಸಾಗರ’ ಎಂದು ನಾಮಕರಣ ಮಾಡಲು ಹು-ಧಾ ಮಹಾನಗರ ಪಾಲಿಕೆ ಠರಾವು ಸ್ವೀಕರಿಸಿ 17 ವರ್ಷಗಳು ಗತಿಸಿವೆ. ಇಷ್ಟು ವರ್ಷಗಳಾದರೂ ಅನುಷ್ಠಾನಕ್ಕೆ ಬರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಉಣಕಲ್ ಕೆರೆ ದಂಡೆಯ ಮೇಲೆ ಶ್ರೀ ಉಳವಿ ಚನ್ನಬಸವೇಶ್ವರ ದೇವಾಲಯವಿದೆ. ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನರು ಚನ್ನಬಸವೇಶ್ವರನ ಭಕ್ತರು. ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ನಡೆಯುವ ಜಾತ್ರೆ, ರಥೋತ್ಸವಕ್ಕೆ ಇಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇದು ಪ್ರವಾಸಿ ಸ್ಥಳವೂ ಹೌದು. ವರ್ಷಪೂರ್ತಿ ಧಾರ್ವಿುಕ ಚಟುವಟಿಕೆಗಳು ನಡೆಯುವ ಶ್ರದ್ಧಾ ಕೇಂದ್ರವಾಗಿದೆ. ಈ ಹಿನ್ನೆಲೆಯಲ್ಲಿ ಉಣಕಲ್ ಕೆರೆಗೆ ಚನ್ನಬಸವ ಸಾಗರ ಎಂದು ನಾಮಕರಣ ಮಾಡಬೇಕೆಂಬ ಕೂಗು ಹಲವು ವರ್ಷಗಳ ಹಿಂದಿನಿಂದಲೂ ಇತ್ತು.

ಇದಕ್ಕೆ 2003ರಲ್ಲಿ ಕಾಲ ಕೂಡಿ ಬಂದಿತ್ತು. ಅಂದು, ಜನವರಿ 16ರಂದು ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಶ್ರೀ ಉಳವಿ ಚನ್ನಬಸವೇಶ್ವರ ದೇವಾಲಯ ಹೊಂದಿರುವ ಉಣಕಲ್ ಕೆರೆಗೆ ‘ಶ್ರೀ ಚನ್ನಬಸವ ಸಾಗರ’ ಎಂದು ನಾಮಕರಣ ಮಾಡಲು ಸರ್ವಾನುಮತದಿಂದ ಠರಾವು (ಸಂಖ್ಯೆ 569) ಸ್ವೀಕರಿಸಲಾಗಿತ್ತು. ಆದರೆ, ಇದುವರೆಗೂ ಪಾಲಿಕೆ ಈ ಠರಾವು ಜಾರಿ ಮಾಡಿಯೇ ಇಲ್ಲ. ಈ 17 ವರ್ಷಗಳಲ್ಲಿ 4 ಸರ್ಕಾರಗಳು ಬದಲಾದವು. ಪಾಲಿಕೆಗೆ ಹಲವು ಮೇಯರ್​ಗಳು- ಆಯುಕ್ತರು ಬಂದು ಹೋದರು. ಆದರೂ ಈ ಠರಾವು ಅನುಷ್ಠಾನಕ್ಕೆ ಬರಲೇ ಇಲ್ಲ.

ಇತ್ತೀಚೆಗೆ ಕೇಂದ್ರ ಸರ್ಕಾರ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣವೆಂದು ನಾಮಕರಣಕ್ಕೆ ಆಕ್ಷೇಪವಿಲ್ಲ ಎಂದು ತಿಳಿಸಿದೆ. ಮುಂದೆ ಹುಬ್ಬಳ್ಳಿ ವಿಮಾನ ನಿಲ್ದಾಣವು ಹೊಸ ಹೆಸರಿನೊಂದಿಗೆ ಕರೆಯಲ್ಪಡಬಹುದು. ಈ ಹಿನ್ನೆಲೆಯಲ್ಲಿ ಪುರಾತನ ಉಣಕಲ್ ಕೆರೆಗೆ ಪಾಲಿಕೆ ಠರಾವಿನಲ್ಲಿ ಸೂಚಿತ ಚನ್ನಬಸವ ಸಾಗರ ಎಂದೇ ನಾಮಕರಣ ಮಾಡಬೇಕೆಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಠರಾವು ಸ್ವೀಕರಿಸಿದ ಮೇಲೆ ಪಾಲಿಕೆ ಇನ್ನೂ ಏಕೆ ಅನುಷ್ಠಾನಕ್ಕೆ ತಂದಿಲ್ಲ? ಠರಾವನ್ನು ಸರ್ಕಾರಕ್ಕೆ ಕಳುಹಿಸಿರುವ ಅಥವಾ ಸರ್ಕಾರದಿಂದ ತಡೆ ಬಂದಿರುವ ಬಗ್ಗೆ ಪಾಲಿಕೆಯಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಸರ್ಕಾರದ ನಿರ್ದೇಶನಕ್ಕೆ ಕಾಯದೇ ಸ್ಥಳೀಯವಾಗಿಯೂ ಪಾಲಿಕೆಯ ವಲಯ ಕಚೇರಿ ಅಧಿಕಾರಿಗಳು ನಾಮಕರಣದ ಫಲಕ ಅಳವಡಿಸಬಹುದಿತ್ತು. ಅದನ್ನು ಸಹ ಮಾಡಿಲ್ಲ. ಇಷ್ಟು ವರ್ಷ ಕಾಲಹರಣ ಮಾಡಿದ್ದು ಯಾಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಉಣಕಲ್ ಕೆರೆ ದಂಡೆಯ ಮೇಲೆ ಪ್ರಸಿದ್ಧ ಸಿದ್ದಪ್ಪಜ್ಜನ ಗುಡಿಯೂ ಇದೆ. ಇದಕ್ಕೆ ಉಣಕಲ್ ಸಿದ್ದಪ್ಪಜ್ಜ ಕೆರೆ ಎಂದು ಸ್ಥಳೀಯರು ಕರೆಯುತ್ತಾರೆ. ಬೇರೆ ಹೆಸರು ಇಡುವ ಅಗತ್ಯವಿಲ್ಲ ಎಂಬ ವಾದವೂ ಕೇಳಿ ಬಂದಿತ್ತು. ಆದರೆ, 2002-07ರ ಅವಧಿಗೆ ಉಣಕಲ್ ಭಾಗದ ಪಾಲಿಕೆ ಸದಸ್ಯರಾಗಿದ್ದ ಮಲ್ಲಿಕಾರ್ಜುನ ಗುಂಡೂರ ಇದನ್ನು ಒಪ್ಪುವುದಿಲ್ಲ. ಈ ಸಂಬಂಧ ಪಾಲಿಕೆ ಠರಾವು ಸ್ವೀಕರಿಸಲು ಗುಂಡೂರ ಕಾರಣೀಕರ್ತರಾಗಿದ್ದರು. ‘ಉಣಕಲ್ ಕೆರೆಗೆ ಚನ್ನಬಸವ ಸಾಗರ ಎಂದು ನಾಮಕರಣ ಮಾಡಲು ಯಾರ ವಿರೋಧವೂ ಇರಲಿಲ್ಲ. ಪಾಲಿಕೆ ಸಭೆಯಲ್ಲಿ ಯಾರೂ ಬೇಡ ಎಂದು ಹೇಳಿರಲಿಲ್ಲ. ಠರಾವು ಸ್ವೀಕರಿಸಿದ ಬಳಿಕ ಸರ್ಕಾರಕ್ಕೆ ಕಳುಹಿಸಬೇಕಿತ್ತು. ಮುಂದೆ 2 ಬಾರಿ ಪಾಲಿಕೆ ಸಭೆಯಲ್ಲಿ ಆಗ್ರಹ ಮಾಡಿದ್ದೆವು. ಬಳಿಕ ನಮ್ಮ ಸದಸ್ಯತ್ವದ ಅವಧಿ ಮುಗಿದಿತ್ತು. ಮುಂದೆ ಆಯ್ಕೆಯಾದವರು ಈ ಕುರಿತು ಪ್ರಸ್ತಾಪ ಮಾಡಿಲ್ಲ’ ಎಂದು ಗುಂಡೂರ ಹೇಳುತ್ತಾರೆ.

12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ತರುವಾಯ ಶ್ರೀಚನ್ನಬಸವೇಶ್ವರರ ನೇತೃತ್ವದ ಶರಣರ ತಂಡ ಉಳವಿಯತ್ತ ಸಾಗುವಾಗ ಉಣಕಲ್ ಕೆರೆಯ ದಂಡೆಯ ಮೇಲೆ ವಿಶ್ರಾಂತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಉಣಕಲ್ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಐತಿಹಾಸಿಕ ಮಹತ್ವವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net