

ರಿಪ್ಪನ್‌ಪೇಟೆ: ಕೆರೆಹಳ್ಳಿ ಊರಿನ ಜನ ತವರು ಮನೆಯವರಂತೆ ಉಡಿತುಂಬಿ ಹರಸಿದ ಕ್ಷಣ ನನ್ನ ಜನ್ಮದಲ್ಲಿಯೇ ಅವಿಸ್ಮರಣೀಯವಾದುದು ಎಂದು ನಿವೃತ್ತ ಶಿಕ್ಷಕಿ ಶಾಂತಮ್ಮ ಭಾವಪರವಶರಾದರು.
ಕೆರೆಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶನಿವಾರ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದಿಂದ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, 1985ರಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಆರಂಭಿಸಿ ಸುದೀರ್ಘ 37 ವರ್ಷಗಳ ಕಾಲ ಕೋಡೂರು, ಗವಟೂರು ಹಾಗೂ ಕೆರೆಹಳ್ಳಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ವಿದ್ಯಾಭ್ಯಾಸದ ಜತೆಗೆ ವಿದ್ಯಾರ್ಥಿಗಳಿಗೆ ಜೀವನದ ಪಾಠ ಕಲಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂದರು.
ಕರ್ತವ್ಯ ನಿರ್ವಹಿಸಿದ ಶಾಲೆಗಳಲ್ಲಿ ಮಕ್ಕಳು ಹಾಗೂ ಆ ಊರಿನ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ವರ್ಗಾವಣೆ ಸಹಜವಾಗಿದ್ದರೂ ಆ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಮತ್ತು ಪೋಷಕರು ಭಾರ ಹೃದಯದಿಂದಲೇ ನನ್ನನ್ನು ಬೀಳ್ಕೊಟ್ಟಿದ್ದರು. ಆದರೆ ನಿವೃತ್ತಿಯ ಈ ದಿನ ಕೆರೆಹಳ್ಳಿಯ ಜನರು ಅವರ ಮನೆಗಳಿಗೆ ಆಹ್ವಾನಿಸಿ ಉಡಿತುಂಬಿ ಅರಿಶಿಣ, ಕುಂಕುಮ ನೀಡಿ ಹರಸಿದ ಕ್ಷಣವನ್ನು ನಾನೆಂದು ಮರೆಯಲಾಗುವುದಿಲ್ಲ. ಕೇವಲ ಶಾಲಾ ಶಿಕ್ಷಕಿಯನ್ನಾಗಿ ನನ್ನನ್ನು ನೋಡದೆ ಮನೆಯ ಮಗಳಂತೆ ಗೌರವ ನೀಡಿರುವುದು ಬಹಳ ಸಂತೋಷವಾದುದು. ಇದು ನನ್ನ ಕರ್ತವ್ಯಕ್ಕೆ ಸಂದ ಗೌರವ ಎಂದರು.
ಶಿಕ್ಷಕಿ ಶಾಂತಮ್ಮ ವಿದ್ಯಾರ್ಥಿಗಳಿಗೆ ಪಠ್ಯಪರಿಕರಗಳನ್ನು ಹಾಗೂ ಶಾಲೆಗೆ ಗಾಡ್ರೇಜ್ ಬೀರು ಕೊಡುಗೆಯಾಗಿ ನೀಡಿದರು.