ಉಚ್ಚಂಗಿಯಲ್ಲಮ್ಮ ನೂತನ ಮುಖಪದ್ಮ ಲೋಕಾರ್ಪಣೆ

Ucchhangi Yallamma Devi
Published on

ಚಿತ್ರದುರ್ಗ: ರಾಜಬೀದಿ ಕೋಟೆ ಮಾರ್ಗದ ರಾಜಮಾತೆ ಉಚ್ಚಂಗಿಯಲ್ಲಮ್ಮ ದೇವಿಯ ಬಂಗಾರ ಲೇಪಿತ ನೂತನ ಬೆಳ್ಳಿಯ ಮುಖಪದ್ಮ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆಯಾಯಿತು.

ಕೋಟೆನಾಡಿನ ಪ್ರಮುಖ ಶಕ್ತಿದೇವತೆಯಾದ ಉತ್ಸವಾಂಬ ದೇವಿಯ ನೂತನ ಉತ್ಸವ ಮೂರ್ತಿಗೆ ಬ್ರಾಹ್ಮೀ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ ಜರುಗಿತು. ದೇವಿ ಮಂತ್ರ, ಉಧೋ ಉಧೋ ಜಯಘೋಷದೊಂದಿಗೆ ಜೀವಕಳೆ ತುಂಬಲಾಯಿತು.

ಲೋಕಾರ್ಪಣೆ ಅಂಗವಾಗಿ ಮೂರ್ತಿಯನ್ನು ಹೊಂಬಾಳೆ, ಗುಲಾಬಿ, ಮಲ್ಲಿಗೆ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ ನಂತರ ಪಲ್ಲಕ್ಕಿಯೊಳಗೆ ಪ್ರತಿಷ್ಠಾಪಿಸಿ, ಮೆರವಣಿಗೆ ಮೂಲಕ ಬುರುಜನಹಟ್ಟಿಯಲ್ಲಿನ ಉಚ್ಚಂಗಿ ಹೊಂಡ ಎಂದೇ ಕರೆಯಲ್ಪಡುವ ಸಿಹಿನೀರು ಹೊಂಡಕ್ಕೆ ಕರೆತಂದು ಗಂಗಾಪೂಜೆ ನೆರವೇರಿತು. ನೆರೆದಿದ್ದ ಭಕ್ತರ ಹಷೋದ್ಗಾರ ಮುಗಿಲುಮುಟ್ಟಿತು.

ಪುನಃ ಉರುಮೆ, ಡೊಳ್ಳು ವಾದ್ಯಗಳೊಂದಿಗೆ ದೇಗುಲದವರೆಗೆ ಪಲ್ಲಕ್ಕಿ ಮೂಲಕ ಕರೆತರಲಾಯಿತು. 25ಕ್ಕೂ ಹೆಚ್ಚು ಸ್ತ್ರೀಯರು ಪೂರ್ಣಕುಂಭ ಹೊತ್ತು ಗಮನ ಸೆಳೆದರು. ಮಾಳಪ್ಪನಹಟ್ಟಿ, ಬುರುಜನಹಟ್ಟಿ ಸೇರಿ ವಿವಿಧ ಭಾಗಗಳ ಭಕ್ತರು ಪಾಲ್ಗೊಂಡಿದ್ದರು. ಗರ್ಭಗುಡಿಯ ಮೂರ್ತಿಗೂ ವಿಶೇಷಾಲಂಕಾರ ಸೇವೆ ನೆರವೇರಿತು.

ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನೂತನ ಮುಖಪದ್ಮ ಲೋಕಾರ್ಪಣೆಗೊಂಡಿದ್ದು, ಮಂಗಳವಾರ ರಾತ್ರಿ 11.30ರ ನಂತರ ಸಾರು ಹಾಕುವ ಮೂಲಕ ಉತ್ಸವ ಆರಂಭವಾಗಲಿದೆ. ಸತತ 15 ದಿನ ನಡೆಯಲಿದ್ದು, ಮೇ 18ರಿಂದ ಕಳೆಗಟ್ಟಲಿದೆ. 25ರವರೆಗೂ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮುಂದುವರೆದಿದೆ. 28ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಮುಕ್ತಾಯವಾಗಲಿದೆ.

ಕಂಗೊಳಿಸಿದ ನೂತನ ಆಭರಣಗಳು: ಭಕ್ತರ ಸಹಕಾರದಿಂದ ಮುಖ ಪದ್ಮ ಮಾತ್ರವಲ್ಲದೆ, ಕಿರೀಟ, ಕತ್ತಿ, ಛತ್ರಿ, ಸೊಂಟದ ಪಟ್ಟಿ, ದೇವಿಯ ತಲೆಯ ಮೇಲಿರಿಸುವ ಏಳು ಹೆಡೆಯ ಸರ್ಪಾಭರಣ, ಕೊರಳಿನ ರುಂಡ ಮಾಲೆ ಸೇರಿ ಇನ್ನಿತರೆ ಬೆಳ್ಳಿಯ ಆಭರಣಗಳು ಇದೇ ವೇಳೆ ಲೋಕಾರ್ಪಣೆಗೊಂಡವು. ಆಭರಣ ತಯಾರಿಸಿದ್ದ ಶಿಲ್ಪಿ ಸೋಮವಾರ ದೇಗುಲಕ್ಕೆ ಹಸ್ತಾಂತರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net