

ಚಿತ್ರದುರ್ಗ: ನಗರದೇವತೆಗಳಾದ ಉಚ್ಚಂಗಿಯಲ್ಲಮ್ಮ, ಬನ್ನಿ ಮಹಾಕಾಳಮ್ಮ ದೇವಿಯ ಕೆಂಡೋತ್ಸವ ಅನೇಕ ಭಕ್ತರ ಸಮ್ಮುಖದಲ್ಲಿ ಶನಿವಾರ ಸಂತೆಹೊಂಡ ಸಮೀಪ ಶಾಸ್ತ್ರೋಕ್ತವಾಗಿ ನೆರವೇರಿತು.
ಉತ್ಸವಾಂಬ ದೇವಿಯ ಉತ್ಸವ ಮೂರ್ತಿ, ಪಲ್ಲಕ್ಕಿಯನ್ನು ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ಕೆಂಡೋತ್ಸವ ಸ್ಥಳಕ್ಕೆ ಸಕಲ ಮಂಗಳವಾದ್ಯಗಳ ಸಮೇತ ಕರೆತರಲಾಯಿತು.
ಅರ್ಚಕರು ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ವೇಳೆ ಉಧೋ ಉಧೋ ಎಂಬ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಇದಕ್ಕೂ ಮುನ್ನ ಸಿಹಿನೀರು ಹೊಂಡದಲ್ಲಿ ದೇವಿಗೆ ಗಂಗಾಪೂಜೆ ಜರುಗಿತು. ಕೆಂಡೋತ್ಸವದ ಅಂಗವಾಗಿ ಕೋಟೆರಸ್ತೆಯ ದೇವಿ ದೇಗುಲದ ಮೂಲ ಮೂರ್ತಿಗೆ ದೊಡ್ಡ ಭಂಡಾರದ ಪೂಜೆ, ಹೂವಿನಾಲಂಕಾರ ನೆರವೇರಿತು.
ಕೆಂಡೋತ್ಸವದ ನಂತರ ದೇವಿಯ ಮೂರ್ತಿಯನ್ನು ದೇಗುಲಕ್ಕೆ ಕರೆತಂದು ಗುಡಿ ತುಂಬಿಸಲಾಯಿತು.