ಉಚಿತ ಶಿಕ್ಷಣಕ್ಕೂ ಆಸಕ್ತಿ ಇರಲಿ

bkt-14-1
Published on

ಬಾಗಲಕೋಟೆ: ವಿವಿಧ ಯೋಜನೆಯಡಿ ಉಚಿತ ಸೌಲಭ್ಯ ಪಡೆಯುವಲ್ಲಿ ತೋರಿದ ಆಸಕ್ತಿ, ಸರಕಾರಿ ಶಾಲೆಗಳಲ್ಲಿ ದೊರೆಯುವ ಉಚಿತ ಶಿಕ್ಷಣ ಪಡೆಯುವಲ್ಲಿಯೂ ಇರಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ರಾಜ್ಯ ಮಕ್ಕಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾ ಭವನದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಆರ್‌ಟಿಇ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ(ಪೋಕ್ಸೋ)-೨೦೧೨ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ, ಸರಕಾರಿ ಶಾಲೆಗಳಲ್ಲಿ ಉಚಿತವಾದ ಶಿಕ್ಷಣ ದೊರೆಯುತ್ತಿದ್ದರೂ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಆಸಕ್ತಿವಹಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಗುಣಮಟ್ಟದ ಶಿಕ್ಷಣದ ಕೊರತೆ. ಅಧಿಕಾರಿ ಮತ್ತು ಶಿಕ್ಷಕ ವರ್ಗದವರು ಗುಣಮಟ್ಟದ ಶಿಕ್ಷಣ ನೀಡಲು, ಪೊಲೀಸ್ ಇಲಾಖೆ ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಬೇಕು.
ರಾಜ್ಯದಲ್ಲಿ ೨೮ ಸಾವಿರ ಬಾಲ ತಾಯಂದಿರು ಇರುವುದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಗಮನಕ್ಕೆ ಬಂದಿರುತ್ತದೆ. ಈ ನಿಟ್ಟಿನಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳು ಕಾಯಿದೆ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಕರ್ತವ್ಯಲೋಪವನ್ನು ಸಹಿಸುವದಿಲ್ಲ ಎಂದು ಎಚ್ಚರಿಸಿದರು.

ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪಾ ಎಸ್ ಬಿ ಮಾತನಾಡಿ ಮಕ್ಕಳು ಚೆನ್ನಾಗಿ ಬೆಳೆದಾಗ ದೇಶದ ಬೆಳವಣಿಗೆ ಕೂಡ ಚೆನ್ನಾಗಿ ಆಗಲು ಸಾದ್ಯವಾಗುತ್ತದೆ. ಮಕ್ಕಳು ಬೇರೆ ಬೇರೆ ಕೃತ್ಯಗಳಲ್ಲಿ ತೊಡಗಲು ಪ್ರಾರಂಭಿಸಿದಲ್ಲಿ ಮುಂದೆ ದೇಶಕ್ಕೆ ಕಂಠಕವಾಗುವ ಸಾಧ್ಯತೆ ಇರುತ್ತದೆ. ಪಾಲಕರಿಗೆ ಬಾಲ್ಯ ವಿವಾಹ ಮಾಡದಿರುವಂತೆ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಕುರಿತು ಜಾಗೃತಿ ಮೂಡಿಸುವುದು, ಸಮಾಲೋಚನೆ ಮಾಡಿಸುವ ಕರ್ತವ್ಯಗಳನ್ನು ಮಾಡಿ, ಇಂದಿನ ಮಕ್ಕಳನ್ನು ಮುಂದಿನ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾಯಿದೆಗಳ ಬಗ್ಗೆ ಸಂಪೂರ್ಣಜ್ಞಾನ ಇಲ್ಲದಿರುವುದು ವಿಷಾಧನೀಯ ವಿಷಯ. ಘಟನೋತ್ತರವಾಗಿ ಕಾರ್ಯನಿರ್ವಹಿಸುವದಕಿಂತ ಸಮಾಜ ಘಾತುಕ ಘಟನೆಗಳು ನಡೆಯದಂತೆ, ಸಮಾಜಕ್ಕೆ ನಮ್ಮದೂ ಒಂದು ಕೊಡುಗೆ ಇರಲಿ ಎಂಬ ಭಾವನೆಯೊಂದಿಗೆ ಕಾರ್ಯನಿರ್ವಹಿಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಶಿಧರ ಕುರೇರ್ ಮಾತನಾಡಿ, ಮಕ್ಕಳ ಸ್ನೇಹಿಯಾಗಿ ಕೆಲಸ ಮಾಡಲು ಮಕ್ಕಳ ಗ್ರಾಮ ಸಭೆಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸರಿಯಾಗಿ ಗ್ರಾಮ ಸಭೆಗಳನ್ನು ನಡೆಸಿ ಸಲಹೆ ಸೂಚನೆಗಳನ್ನು ಪಡೆಯುವ ಮತ್ತು ನೀಡುವ ಕಾರ್ಯಮಾಡಬೇಕು. ಜವಾಬ್ದಾರಿ ಅರಿತು ಸರಕಾರ ಮಕ್ಕಳ ಲಾಲನೆ ಪಾಲನೆಗೆ ನೀಡಿರುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ಕಾರ್ಯಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಅಮರೇಶ ಹೆಚ್ ಸ್ವಾಗತಿಸಿದರು. ಸಖಿ ಸೆಂಟರನ ಶಂಕರಮ್ಮಾ ಜಮ್ಮನಕಟ್ಟಿ ನಿರೂಪಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಪೊಲೀಸ್ ತರಬೇತುದಾರ ರೋಹಿತ ಸಿ ಜೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಎಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net