ಉಚಿತ ವಿದ್ಯುತ್‌ಗೆ ಗ್ರಾಹಕರು ಫುಲ್‌ಖುಷ್!

electric current bill
Published on

ಕೆ.ಆರ್.ಪೇಟೆ: ಚುನಾವಣೆ ವೇಳೆ ಘೋಷಿಸಿದಂತೆ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಗ್ಯಾರಂಟಿಯಾದ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆ.1ರಿಂದ ಶೂನ್ಯ ಬಿಲ್ ನೀಡಲಾಗುತ್ತಿದೆ.


ಅರ್ಜಿ ಸಲ್ಲಿಸಿರುವ ಗ್ರಾಹಕರಿಗೆ ಮಾತ್ರ ಗೃಹಜ್ಯೋತಿ ಶೂನ್ಯ ಬಿಲ್ ನೀಡಲಾಗುತ್ತಿದೆ. ಉಚಿತ ವಿದ್ಯುತ್ ನೀಡಲು ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದ್ದು, ಗ್ರಾಹಕರ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆಗೆ ಹೆಚ್ಚುವರಿ ಶೇ.10ರಷ್ಟು ಮಾತ್ರ ಬಳಸಲು ಅವಕಾಶವಿದೆ. ಈ ಮಾನದಂಡಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆಗೆ ಗ್ರಾಹಕರು ಬಿಲ್ ಕಟ್ಟಬೇಕಿದೆ. ಈ ಯೋಜನೆಯ ಲಾಭ ಪಡೆಯಲು ಗ್ರಾಹಕರು ಜೂನ್ ತಿಂಗಳ ವಿದ್ಯುತ್ ಬಳಕೆ ದರವನ್ನು ಜುಲೈನಲ್ಲಿ ಸೆಸ್ಕ್ ನೀಡಿರುವ ರಸೀದಿಗೆ ಅನುಗುಣವಾಗಿ ಪಾವತಿಸಿರಬೇಕು. ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್‌ನಿಂದ ಸೆಸ್ಕ್ ಮೂಲಕವೇ ಶೂನ್ಯ ಬಿಲ್ ನೀಡಲಾಗುತ್ತಿದೆ.


ವಿದ್ಯುತ್ ಲೆಕ್ಕಾಚಾರ?: ಯೋಜನೆ ದುರ್ಬಳಕೆಯನ್ನು ತಡೆಯುವುದಕ್ಕೆ 12 ತಿಂಗಳ ವಾರ್ಷಿಕ ವಿದ್ಯುತ್ ಬಳಕೆಯ ಸರಾಸರಿ ಪ್ರಮಾಣ ತೆಗೆದುಕೊಂಡು ಅದರ ಮೇಲೆ ಶೇ.10ರಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ವರ್ಷಕ್ಕೆ ಗ್ರಾಹಕರು ಸರಾಸರಿ 120 ಯೂನಿಟ್ ವಿದ್ಯುತ್ ಬಳಸಿದ್ದರೆ ಅದಕ್ಕೆ ಶೇ.10 ರಷ್ಟು ಹೆಚ್ಚಿಸಿ 132 ಯೂನಿಟ್‌ವರೆಗೂ ಉಚಿತ ವಿದ್ಯುತ್ ಅನ್ನು ಸರ್ಕಾರ ನೀಡಲಿದೆ. ಗರಿಷ್ಠ 200 ಯೂನಿಟ್ ಮಾತ್ರ ಉಚಿತವಾಗಿರಲಿದೆ.


ಈ ಯೋಜನೆಗೆ ಸೆಸ್ಕ್‌ನ ಎಲ್‌ಟಿ 1 ಮತ್ತು ಎಲ್‌ಟಿ 2 ವರ್ಗದ ಗ್ರಾಹಕರು ಅರ್ಹರಾಗಿದ್ದಾರೆ. ತಾಲೂಕಿನಾದ್ಯಂತ ಈ ವರ್ಗದ ಸುಮಾರು 69 ಸಾವಿರ ಗ್ರಾಹಕರಿದ್ದಾರೆ. ಜುಲೈ ತಿಂಗಳಿನಲ್ಲಿ 51 ಸಾವಿರ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಮಾತ್ರ ಉಚಿತ ವಿದ್ಯುತ್ ಸಿಗುತ್ತಿದೆ. ಉಳಿದ 18 ಸಾವಿರ ಗ್ರಾಹಕರು ಅರ್ಜಿ ಸಲ್ಲಿಸದಿರುವ ಕಾರಣ ಜುಲೈ ತಿಂಗಳ ಉಚಿತ ವಿದ್ಯುತ್ ಇವರಿಗೆ ಸಿಗುವುದಿಲ್ಲ. ಸೆಸ್ಕ್ ಸಿಬ್ಬಂದಿ ಈಗಾಗಲೇ ವಿದ್ಯುತ್ ಬಳಕೆ ಮೀಟರ್ ಅನ್ನು ಆ.1 ರಿಂದ ರೀಡಿಂಗ್ ಮಾಡುತ್ತಿದ್ದು ಶೂನ್ಯ ಬಿಲ್‌ಗೆ ಗ್ರಾಹಕರು ಖುಷಿ ಪಡುತ್ತಿದ್ದಾರೆ. ಗೃಹಜ್ಯೋತಿ ಬಿಲ್ ಅನ್ನು ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net