

ಮೈಸೂರು: ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸೆಸ್ಕ್ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರು ಗುಣಮಟ್ಟ, ನಿರಂತರ ವಿದ್ಯುತ್ ಕೇಳುತ್ತಿದ್ದಾರೆಯೇ ಹೊರತು, ಉಚಿತ ವಿದ್ಯುತ್ ಅಲ್ಲ. ಈ ರೀತಿ ಭರವಸೆಯಿಂದ ವಿದ್ಯುತ್ ಪ್ರಸರಣ ನಿಗಮಗಳನ್ನು(ಎಸ್ಕಾಂ) ಮುಳುಗಿಸುವ ಕೆಲಸ ಮಾಡಬಾರದು. ಬದಲಿಗೆ ಅವುಗಳನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದರು.
ಈ ಹಿಂದಿನ ಸರ್ಕಾರ ಮಾಡಿದ್ದ ಸಾಲವನ್ನು ಈಗ ತೀರಿಸಲಾಗುತ್ತಿದೆ. 30 ಸಾವಿರ ಕೋಟಿ ರೂ. ಸಾಲದ ಸುಳಿಗೆ ಸಿಲುಕಿಸಿದ್ದರು. ಹುಬ್ಬಳ್ಳಿ ಹೆಸ್ಕಾಂ ಮೇಲೆ ಹೆಚ್ಚಿನ ಸಾಲವಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ಇದಕ್ಕೆ 9 ಸಾವಿರ ಕೋಟಿ ರೂ. ರಾಜ್ಯ ಸರ್ಕಾರ ನೆರವು ನೀಡಿದೆ. ಚಪ್ಪಾಳೆ ಹೊಡೆಸಿಕೊಳ್ಳಲು ಇದೀಗ ಉಚಿತ ವಿದ್ಯುತ್ ಆಶ್ವಾಸನೆ ನೀಡಿದ್ದು, ಆದರೆ ಈ ರೀತಿ ಆಶ್ವಾಸನೆ ಕೊಡಲು ಬಿಜೆಪಿ ಸಿದ್ಧ ಇಲ್ಲ ಎಂದು ಸ್ಪಷ್ಟಪಡಿಸಿದರು
.
ಇಂಧನ ಇಲಾಖೆಯೊಂದರಿಂದಲೇ ಸಬ್ಸಿಡಿಗಾಗಿ 16 ಸಾವಿರ ಕೋಟಿ ರೂ. ಭರಿಸುತ್ತಿದೆ. ಇದು ಆರ್ಥಿಕ ಹೊರೆಯಾಗಿದೆ. ಹೆಸ್ಕಾಂಗಳು ಲಾಭದತ್ತ ಸಾಗಬೇಕಿದೆ. ಆದರೆ ಅದು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.
ಮುಂದಿನ ಏಪ್ರಿಲ್‌ನಲ್ಲಿ 15,500 ರಿಂದ 16,000 ಸಾವಿರ ಮೆಗಾವಾಟ್ ವಿದ್ಯುತ್ ಬೇಡಿಕೆ ಬರಬಹುದು. ಅದಕ್ಕಾಗಿ ತಯಾರಿ ಮಾಡಿಕೊಳ್ಳಲಾಗಿದೆ. 2022ರ ಮಾರ್ಚ್‌ನಲ್ಲಿ 14 ಸಾವಿರ ಮೆಗಾವಾಟ್ ವಿದ್ಯುತ್ ಬೇಡಿಕೆ ಈವರೆಗಿನ ದಾಖಲೆಯಾಗಿತ್ತು. ಆದರೆ, ಜನವರಿಯಲ್ಲಿ ಇದನ್ನು ಮೀರಿ 14,800 ಮೆಗಾವಾಟ್ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚುತ್ತಲೇ ಸಾಗಲಿದೆ ಎಂದು ಹೇಳಿದರು.