

ಮೈಸೂರು: ಸಂಶೋಧನಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ಮತ್ತು ಶಿಷ್ಯವೇತನ ವಂಚಿತರಿಗೆ ಶಿಷ್ಯವೇತನ ನೀಡಬೇಕು ಎಂದು ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣೆ ಕೇಂದ್ರದ ರಜತ ಮಹೋತ್ಸವದಲ್ಲಿ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್ ಅವರು ಸಿಎಂಗೆ ಪ್ರತ್ಯೇಕವಾಗಿ ಮೂರು ಮನವಿ ಪತ್ರಗಳನ್ನು ಸಲ್ಲಿಸಿದರು.
ವಿವಿ ಸಂಶೋಧನಾ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಮಾತ್ರವೇ ಲ್ಯಾಪ್‌ಟಾಪ್ ಅನ್ನು ಕೊನೆಯ ಬಾರಿ ವಿತರಿಸಲಾಗಿತ್ತು. ಉಳಿದಂತೆ ಇಲ್ಲಿಯ ತನಕ ಯಾವ ಒಬ್ಬ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಶೋಧನಾ ಕಾರ್ಯಕ್ಕೆ, ಗುಣಮಟ್ಟದ ಸಂಶೋಧನೆ ಕೈಗೊಳ್ಳಲು ತೊಂದರೆ ಉಂಟಾಗುತ್ತಿದೆ.
ಕೂಡಲೇ ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ವಿವಿ ವ್ಯಾಪ್ತಿಯಲ್ಲಿ ಸಂಶೋಧನೆ ಮಾಡುತ್ತಿರುವವರು ಶಿಷ್ಯವೇತನ ವಂಚಿತರಾಗಿದ್ದಾರೆ.
ಆದ್ದರಿಂದ ವಿವಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವತಿಯಿಂದ ನೀಡುವ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ಎಲ್ಲ ವಿದ್ಯಾರ್ಥಿಗಳಿಗೂ ಶಿಷ್ಯವೇತನ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಕೋರಿದ್ದಾರೆ.
ಒಂದು ಕಡೆ ಮಾನಸಗಂಗೋತ್ರಿ ಒಳಗೆ ರಜತ ಮಹೋತ್ಸವದ ಹಾಗೂ ನೂತನ ಜ್ಞಾನ ಜ್ಞಾನ ದರ್ಶನ ಕಟ್ಟಡದ ಉದ್ಘಾಟನ ಸಮಾರಂಭ ಇನ್ನೊಂದು ಕಡೆ ಮೈಸೂರು ವಿಶ್ವವಿದ್ಯಾಲಯ ಅಳಿವು-ಉಳಿವಿನ ಪ್ರಶ್ನೆ!
ತಾವು ಈ ಪಾರಂಪರಿಕ ವಿಶ್ವವಿದ್ಯಾಲಯದ ಎದೆಗೆ ಕಿವಿಗೊಟ್ಟು ಕೇಳಿ, ತಾವು ಕಂಡು ಓಡಾಡಿದ ವಿಶ್ವವಿದ್ಯಾಲಯ ಅವನತಿ ಅಂಚಿಗೆ ಸರಿಯುತ್ತಿದೆ ಎಂದು ಸಿಎಂ ಬರೆದ ಬಹಿರಂಗ ಪತ್ರದಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್ ಗಮನ ಸೆಳೆದಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಕುವೆಂಪು ಅವರ ಕನಸಿನ ಬೃಂದಾವನವಾದ ಮೈಸೂರು ವಿವಿ ಈಗ ಉಳಿಯಲು ಕಷ್ಟಪಡುತ್ತಿದೆ. ಪ್ರಾಧ್ಯಾಪಕರ ನೇಮಕಾತಿ ಇಲ್ಲದೆ ಶೈಕ್ಷಣಿಕ ಗುಣಮಟ್ಟ ಕಳೆದುಹೋಗುತ್ತಿದೆ. 1349 ಕಾಯಂ ಹುದ್ದೆಗಳು ಮುಂಜೂರಾಗಿವೆ. ಈ ಪೈಕಿ 400 ಹುದ್ದೆಗಳಲ್ಲಿ ಕಾಯಂ ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೋಧಕ, ಬೋಧಕೇತರ ಸೇರಿ 949 ಕಾಯಂ ಹುದ್ದೆಗಳು ಖಾಲಿ ಹೊಡೆಯುತ್ತಿವೆ ಎಂದು ವರದಿಯಾಗಿದೆ. ಇದರಲ್ಲಿ ಬ್ಯಾಕ್‌ಲಾಗ್ ಹುದ್ದೆಗಳೂ ಇರುವುದನ್ನು ಗಮನಿಸಿಕೊಳ್ಳಬೇಕಾಗಿದೆ.
ಮೈವಿವಿಗೆ 2006ರಲ್ಲಿ ಕೊನೆಯ ಬಾರಿ ನೇಮಕಾತಿ ನಡೆದಿರುತ್ತದೆ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಮೈವಿವಿ ಸೇರಿದಂತೆ ಉಳಿದ ವಿಶ್ವವಿದ್ಯಾಲಯಗಳಲ್ಲಿರುವ ಹುದ್ದೆಗಳಿಗೆ ನೇಮಕಾತಿ ನಡೆಸಬೇಕು. ಅನುದಾನ ಒದಗಿಸಬೇಕು ಎಂದು ಕೋರಿದ್ದಾರೆ.
*9
ಮೈವಿವಿ ಸಂಶೋಧಕರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಎಂಎಲ್‌ಸಿ ಕೆ.ಶಿವಕುಮಾರ್ ಇನ್ನಿತರರಿದ್ದರು