

ಚಿತ್ರದುರ್ಗ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಲು ಪಾಸ್ ವಿತರಿಸುವಂತೆ ಆಗ್ರಹಿಸಿ ಬಳಿ ಮಂಗಳವಾರ ಅಂಗವಿಕಲರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಜುನಾಥ ವಿಕಲಚೇತನರ ಕ್ಷೇಮಾಭಿವೃದ್ಧಿ ಸೇವಾ ಸಂಘದ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು.
ಸದ್ಯ ಸರ್ಕಾರ 660 ರೂ.ಪಡೆದು 100 ಕಿ.ಮೀ.ವ್ಯಾಪ್ತಿಯೊಳಗೆ ಸಂಚರಿಸಲು ಅವಕಾಶ ಮಾಡಿಕೊಡುತ್ತಿದೆ. ರಾಜ್ಯಾದ್ಯಂತ ಉಚಿತ ಸಂಚಾರದ ಸೌಲಭ್ಯ ಒದಗಿಸಬೇಕು. ಮಾಶಾಸನವನ್ನು 3 ಸಾವಿರ ರೂ.ಗಳಿಂದ 5 ಸಾವಿರ ರೂ. ಗೆ ಹೆಚ್ಚಿಸಬೇಕು. ನಗರಸಭೆ,ಪುರಸಭೆ,ಪಪಂ, ಗ್ರಾಪಂ, ತಾಪಂ, ಜಿಪಂಗಳಲ್ಲಿ ಅಂಗವಿಕಲರಿಗೆ ಮೀಸಲಿರುವ ಶೇ.5 ಅನುದಾನ ಅಂಗವಿಕಲರ ಬಳಕೆಗೆ ಸಿಗಬೇಕು.
ಎಲ್ಲ ವಸತಿ ಯೋಜನೆಗಳಲ್ಲಿ ವಸತಿ ಸೌಲಭ್ಯ ಒದಗಿಸಬೇಕು. ಗುತ್ತಿಗೆ, ಹೊರಗುತ್ತಿಗೆ ಆಧಾರದಡಿ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಬೇಕು. ಡಿಸಿ ಪ್ರತಿ ತಿಂಗಳು ಸಭೆ ಕರೆದು ಅಂಗವಿಕಲರ ಕುಂದು ಕೊರತೆ ಆಲಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಆದೇಶ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಂಜುನಾಥ ವಿಕಲಚೇತನರ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಟಿ.ಬಿ.ಮಾರುತಿ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ‌್ಯದರ್ಶಿ ಎಚ್.ಎಸ್.ಪಾಪಯ್ಯ, ಜೈಪ್ರಕಾಶ್, ದಲಿತ ಮುಖಂಡ ಬಿ.ರಾಜಪ್ಪ, ಕೆಕೆಎನ್‌ಎಸ್‌ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಎಚ್.ಪ್ಯಾರೇಜಾನ್ ಮತ್ತಿತರರು ಇದ್ದರು.