

ದೇವನಹಳ್ಳಿ: ಅಂಗವೈಕಲ್ಯ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಹಾಗೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಮ್ಮೇನಹಳ್ಳಿ ರಸ್ತೆಯ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಶ್ರವಣದೋಷ ಹಾಗೂ ಅಂಗವಿಕಲ ಮಕ್ಕಳಿಗೆ ಗಾಲಿಕುರ್ಚಿ ವಿತರಣೆ ಮಾಡಿ ಮಾತನಾಡಿದರು.
ಅಸಹಾಯಕರಾಗಿರುವ ಅಂಗವಿಕಲರು, ಶ್ರವಣದೋಷವುಳ್ಳವರು, ದೃಷ್ಟಿದೋಷವುಳ್ಳವರು, ಕ್ಯಾನ್ಸರ್ ರೋಗಿಗಳು, ಸಂರಕ್ಷಣೆ ಮಾಡಲು ಯಾರೂ ಇಲ್ಲದವರನ್ನು ಗುರುತಿಸಿ, ಪುನರ್ವಸತಿ ಕೇಂದ್ರಕ್ಕೆ ಕರೆತರುವಂತಹ ಕಾರ್ಯವನ್ನು ನಾಗರಿಕರು ಮಾಡಬೇಕು. ಇಲ್ಲಿನ ಬ್ಯಾಪ್ಟಿಸ್ಟ್ ಸೆಂಟರ್‌ನಲ್ಲಿ ಮದ್ಯವ್ಯಸನಿಗಳಿಗೆ ಮುಕ್ತಿ ನೀಡುವ ತೆಗೆ ಶ್ರವಣದೋಷವುಳ್ಳವರಿಗೆ ಯಂತ್ರ, ದೃಷ್ಟಿದೋಷ ಉಳ್ಳವರಿಗೆ ಉಚಿತ ಶಸ್ತ್ರಚಿಕಿತ್ಸೆ, ಬುದ್ಧಿಮಾಂದ್ಯ ಮಕ್ಕಳ ರಕ್ಷಣೆ, ಕೃತಕ ಕಾಲುಗಳು ಅಳವಡಿಸುವಂತಹ ಉತ್ತಮವಾದ ಕಾರ್ಯ ಮಾಡಲಾಗುತ್ತಿದೆ ಎಂದರು.
ಶ್ರವಣ ದೋಷವುಳ್ಳವರಿಗೆ ‘ಬೇರಾ’ (ಬ್ರೈನ್ ಎವೋಕ್ಡ್ ರೆಸ್ಪಾನ್ಸ್ ಆಡಿಟರಿ) ಕೇಂದ್ರ ಆರಂಭಿಸಿದ್ದಾರೆ. 30 ಲಕ್ಷ ರೂ. ವೆಚ್ಚದ ಯಂತ್ರೋಪಕರಣಗಳಿಂದ ಸಮರ್ಪಕ ಲಿತಾಂಶ ಬರುತ್ತಿದೆ ಎಂದರು.
ಶುಶ್ರೂಷಕಿ ಬಿಜಿ ಮಾತನಾಡಿ, ರೋಗಿಗಳ ಮನೆಗಳಿಗೆ ಹೋಗಿ ಯೋಗ ಕ್ಷೇಮ ಕೇಳಿ ಸಂತೈಸುವ ಸೇವೆ ಮಾಡುವುದು ನಮಗೆ ಸಿಕ್ಕಿರುವ ಪುಣ್ಯದ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮ ಸಂಯೋಜಕ ಶಿವಾನಂದ, ಶ್ರವಣ ತಜ್ಞ ರೋಷನ್, ಕ್ಲಿನಿಕಲ್ ಸೈಕಾಲಜಿಸ್ಟ್ ವಿಜಯಾ, ಪುನರ್ವಸತಿ ಕಾರ್ಯಕರ್ತ ರಾಮಪ್ಪ, ಲಕ್ಷ್ಮೀ, ರವಿಕುಮಾರ್, ಮೋನಿಷಾ ಇದ್ದರು.