

ಕೊಳ್ಳೇಗಾಲ: ತಾಲೂಕಿನ ಉಗನೀಯ-ಧನಗೆರೆ ಗ್ರಾಮ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಚಿರತೆಗಳು ಸಂಚರಿಸುತ್ತಿದ್ದು, ಸಂಜೆ ಬಳಿಕ ಮನೆಯಿಂದ ಯಾರೂ ಹೊರಬಾರದಂತೆ ಗ್ರಾಮ ಪಂಚಾಯಿತಿ ರ್ಮಾನು ಹೊರಡಿಸಿದೆ.
ಎರಡು ದಿನಗಳಿಂದ ಉಗನೀಯ ಗ್ರಾಮದ ವೀರಭದ್ರ ಸ್ವಾಮಿ ದೇವಸ್ಥಾನ ಸುತ್ತಲು ಚಿರತೆಗಳು ಕಾಣಿಸಿಕೊಂಡಿವೆ. ಚಿಕ್ಕ ವಯಸ್ಸಿನ ಚಿರತೆಗಳು ಇವಾಗಿದ್ದು, ತಾಯಿಗಾಗಿ ಹುಡುಕಾಟ ಪ್ರಾರಂಭಿಸಿವೆ. ಆದರೆ, ಮನುಷ್ಯರ ಮೇಲೆ ದಾಳಿ ಮಾಡಬಹುದಾಷ್ಟು ಸಾಮರ್ಥ್ಯ ಹೊಂದಿವೆ ಎಂದು ಅರಿತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಸೊಳ್ಳಿಕಟ್ಟೆ ಬಳಿ ಬೋನು ಇರಿಸಿದ್ದು, ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಯಿಂದ ಪ್ರಾಣ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅನಾಹುತ ತಡೆಗೆ ಇನ್ನಿಲ್ಲದ ಪ್ರಯತ್ನಪಡುತ್ತಿದ್ದಾರೆ.
ಮೊಬೈಲ್‌ನಲ್ಲಿ ಸೆರೆ: 6ರ ರಾತ್ರಿ ಉಗನೀಯ ಗ್ರಾಮದಿಂದ ಯುವಕನೊಬ್ಬ ಕಾರಿನಲ್ಲಿ ತೆರಳುತ್ತಿದ್ದಾಗ ಚಿರತೆಗಳು ಪ್ರತ್ಯಕ್ಷವಾಗಿವೆ. ಜೋಡಿ ಚಿರತೆಗಳು ಒಟ್ಟಾಗಿ ಸಂಚರಿಸುವ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಯುವಕ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದ. ಆ ವಿಚಾರ ಎಲ್ಲೆಡೆ ಪ್ರಚಾರವಾಗಿ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲಿಸಿದ್ದಾರೆ. ಹಲವು ದಿನಗಳಿಂದ ಚಿರತೆಗಳು ಉಗನೀಯ, ಧನಗೆರೆ ಚೆಲುವನಹಳ್ಳಿ ಜಮೀನುಗಳಲ್ಲಿ ಸಂಚರಿಸುತ್ತಿದ್ದು ತಡವಾಗಿ ಪ್ರತ್ಯಕ್ಷವಾಗಿವೆ. ಹೇಗಾದರೂ ಮಾಡಿ ಚಿರತೆಗಳನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.