

ಯಳಂದೂರು: ಮತ್ತೆ ಮಳೆ ಆರಂಭವಾಗಿದ್ದು ಕೆರೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರ ನಡುವೆಯೇ ಸುವರ್ಣಾವತಿ ನದಿ ಉಕ್ಕಿ ಹರಿಯುತ್ತಿದ್ದು ತಾಲೂಕಿನಾದ್ಯಂತ ಜನರು ಹೈರಾಣಾಗಿದ್ದಾರೆ.
ಭಾನುವಾರ ರಾತ್ರಿ ಬಿದ್ದ ಮಳೆಯಿಂದ ಸುವರ್ಣಾವತಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಪಟ್ಟಣವೂ ಸೇರಿದಂತೆ ಅಕ್ಕಪಕ್ಕದ ಅಂಬಳೆ, ಯರಿಯೂರು, ಗಣಿಗನೂರು, ಚಾಮಲಾಪುರ, ಮದ್ದೂರು, ಅಗರ, ಮಾಂಬಳ್ಳಿ ಗ್ರಾಮಗಳಲ್ಲಿ ನೀರು ನುಗ್ಗಿ ಜನರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.
ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಕಾಡಿನ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಸಮಿಪದ ಕೃಷ್ಣಯ್ಯನ ಕಟ್ಟೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಈ ಅಣೆಕಟ್ಟೆ ಕೋಡಿ ಬಿದ್ದು ಬಿಳಿಗಿರಿರಂಗನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ತೊಡಕಾಗಿತ್ತು.
ಅಲ್ಲದೆ, ಸಮೀಪದ ಇರಸವಾಡಿ ಕೆರೆಯೂ ಕೋಡಿ ಬಿದ್ದಿದ್ದು ರಸ್ತೆಯ ತುಂಬೆಲ್ಲ ನೀರು ಹರಿಯುತ್ತಿದೆ. ಹೊಂಗನೂರು ಗ್ರಾಮದ ಅಡ್ಡಹಳ್ಳದಲ್ಲಿ ನೀರು ತುಂಬಿ ಕೋಡಿ ಬಿದ್ದಿದೆ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಸವಾರರು ಆಯತಪ್ಪಿ ಹಳ್ಳಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಹಗ್ಗದ ಸಹಾಯದಿಂದ ಇಬ್ಬರನ್ನು ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.