

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಾನಪದವು ನೆಲಮೂಲ ಪರಂಪರೆ ಒಳಗೊಂಡಿದ್ದು, ಅದರ ಅಳಿವು-ಉಳಿವು ಜನರ ಪಾಲ್ಗೊಳ್ಳುವಿಕೆ ಅವಲಂಬಿಸಿದೆ. ಬದಲಾಗುತ್ತಿರುವ ಜಗತ್ತಿನ ನಡುವೆ ಕಲೆ- ಕಲಾವಿದರನ್ನು ಗುರುತಿಸಿ ಅವರಿಗೆ ಗೌರವ ಸಿಗುವಂತೆ ಮಾಡುವುದು. ಅಲ್ಲದೆ ನಾಡಿನ ನೆಲದ ಸಂಸ್ಕೃತಿ ಉಳಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ಜಾನಪದ ಪರಿಷತ್ ಸಭೆಯಲ್ಲಿ ಅವರು ಮಾತನಾಡಿದರು.
ಡಾ. ಶ್ರೀಶೈಲ ಹುದ್ದಾರ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ ಕಾರ್ಯಕ್ರಮಗಳಿಗೆ ಯಾವುದೇ ಅನುದಾನ ಹೊಂದಿಲ್ಲ. ಇಂದು ಜನರಿಂದ ಜನರಿಗಾಗಿ, ಜನಪದರಿಂದ ಜನಪದರಿಗಾಗಿ ಹುಟ್ಟಿದ ಪರಿಷತ್ ಆಗಿದ್ದು ಜನರ ಸಹಭಾಗಿತ್ವ ಅತ್ಯಗತ್ಯ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಪ್ರತಿ ಗ್ರಾಮ ಮಟ್ಟದಲ್ಲಿ ಸಂಘಟಕರನ್ನು ನೇಮಿಸಿ ಅವರಿಂದ ಗ್ರಾಮದಲ್ಲಿನ ಕಲೆಯ ಕಲಾವಿದರ ಗಣತಿಯಾಗಬೇಕು. ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ ಉಳಿದ ಪರಿಷತ್‌ಗಳಿಗೆ ಮಾದರಿಯಾಗಬೇಕು ಎಂದರು.
ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮಾತನಾಡಿ, ಉತ್ತರ ಕರ್ನಾಟಕದ ಜನಪದ ಕಲೆಗಳನ್ನು ಅಗತ್ಯ ಸಂದರ್ಭದಲ್ಲಿ ಮಾತ್ರ ಬಳಸದೆ ಅವರಲ್ಲಿನ ಪ್ರತಿಭೆ ಗುರುತಿಸುವ ಕಾರ್ಯ ನಡೆಯಲಿ.
ಜನಪದ ವಿದ್ವಾಂಸ ಡಾ.ವಿ.ಎಲ್. ಪಾಟೀಲ, ಸಾಹಿತಿಗಳಾದ ಡಾ. ಸಂಗಮನಾಥ ಲೋಕಾಪುರ, ಡಾ. ಶಂಭು ಹೆಗಡಾಳ, ಎಸ್.ಬಿ. ಗುತ್ತಲ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಮುಂದಿನ ದಿನಗಳಲ್ಲಿ ಆಯಾ ತಾಲೂಕಿನ ಕಲಾವಿದರು, ಸಾಹಿತ್ಯಾಸಕ್ತರ ಸಮ್ಮುಖದಲ್ಲೇ ಆಯಾ ತಾಲೂಕಿನ ಜನಪದ ಪರಿಷರ್ ರಚನೆಯಾಗಿ ಉತ್ತಮ ಯೋಜನೆ ರೂಪಿಸುವಂತೆ ಸರ್ವ ಸಮ್ಮತದಿಂದ ತೀರ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನವಾಗಿ ಧಾರವಾಡ ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ರಾಮೂ ಮೂಲಗಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ಡಾ. ಶ್ರೀಶೈಲ ಹುದ್ದಾರ ಅಧಿಕಾರ ಹಸ್ತಾಂತರಿಸಿದರು.
ಶಿವಶರಣ ಕಲಬಶೆಟ್ಟರ, ಪಿ.ಎಚ್. ನೀರಲಕೇರಿ, ಬಸವರಾಜ ಮ್ಯಾಗೇರಿ, ನಾಗರಾಜ ಎಸ್., ಇಮಾಮಸಾಬ ವಲ್ಲೆಪ್ಪನವರ, ಡಾ. ಗಿರೀಶ ದೇಸೂರ, ಡಾ. ಶಿವಾನಂದ ಟವಳಿ, ಗುರುಸಿದ್ದಪ್ಪ ಬಡಿಗೇರ, ಎಸ್.ಸಿ. ಶಾನವಾಡ, ಶಾರದಾ ಕೌದಿ, ಎನ್. ಕೀರ್ತಿವತಿ, ಪ್ರಮೀಳಾ ಜಕ್ಕಣ್ಣವರ, ಇತರರು ಇದ್ದರು.