ಉ.ಕ. ದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುತ್ತೇನೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ರಾಜಕೀಯದಲ್ಲಿ ಕಾರ್ಯಕರ್ತರಿಗೆ ಶಾಸಕರಾಗುವ, ಶಾಸಕರಿಗೆ ಮಂತ್ರಿ, ಮಂತ್ರಿಗಳಿಗೆ ಸಿಎಂ ಆಗುವ ಆಸೆ ಇರುತ್ತದೆ. ಇದು ಸಾಮಾನ್ಯ. ಉತ್ತರ ಕರ್ನಾಟಕದವರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿದ್ಯ ಸಿಗಬೇಕು. ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರು ಸಿಎಂ ಆಗಬೇಕು ಎಂಬ ಅಭಿಪ್ರಾಯವು ಇದೆ. ಸಿಎಲ್​ಪಿ ಸಭೆಗೆ ಕೆಲವು ನಾಯಕರು ವೈಯಕ್ತಿಕ ಕಾರಣಕ್ಕೆ ಗೈರಾಗಿರಬಹುದು, ಉದ್ದೇಶ ಪೂರ್ವಕವಾಗಿ ಹಾಜರಾಗಿಲ್ಲವೆಂದು ಭಾವಿಸಬಾರದು ಎಂದರು.

ಯಾವುದೇ ಸರ್ಕಾರವಿದ್ದರೂ ಉ.ಕ. ಕ್ಕೆ ತಾರತಮ್ಯ ಮಾಡಲಾಗಿದೆ. ನಮ್ಮ ಎಲ್ಲ ಪ್ರಮುಖ ನೀರಾವರಿ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಶಾಸಕರಿಗೂ ಮಂತ್ರಿ ಸ್ಥಾನದ ಬಗ್ಗೆ ಆಸೆ ಇರುತ್ತದೆ. ಇಲ್ಲಿ ಯಾರು ಸಹ ಸನ್ಯಾಸಿಗಳಲ್ಲ. ತಮಗೂ ಒಂದು ಅವಕಾಶ ನೀಡಲು ಕೇಳುತ್ತಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ವರಿಷ್ಠರಿಗೆ ಬಿಟ್ಟಿದ್ದು. ಈ ಬಗ್ಗೆ ಏನು ಚರ್ಚೆ ನಡೆದಿದೆ ನನಗೆ ಗೊತ್ತಿಲ್ಲ. ಹಿಂದಿನಿಂದಲೂ ಅವರ ನಿರ್ಣಯದಂತೆ ಎಲ್ಲವೂ ಆಗಿದೆ. ಅಧಿಕಾರ ಹಂಚಿಕೆ ಬಗ್ಗೆಯೂ ಸಹ ನನಗೆ ಗೊತ್ತಿಲ್ಲ ಎಂದರು.

ಪಕ್ಷದಲ್ಲಿ ಶಿಸ್ತು ಮುಖ್ಯ. ಶಿಸ್ತಿನ ಉಲ್ಲಂಘನೆಯಾದಲ್ಲಿ ಪಕ್ಷ ಶಿಥಿಲವಾಗುತ್ತದೆ. ಆದ್ದರಿಂದ ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ಸೂಚಿಸಿದ್ದಾರೆ. ಏನೇ ಸಮಸ್ಯೆಯಿದ್ದರೂ ತಮ್ಮ ಮುಂದೆ ಹೇಳಿಕೊಳ್ಳಲು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಬೇಕು ಎಂಬುವುದು ಎಲ್ಲಿಯೂ ಚರ್ಚೆ ಆಗಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net