ಉ.ಕ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಲಿ

abbayya prasad
Published on

ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ವಿಶೇಷ ಯೋಜನೆಗಳನ್ನು ಘೊಷಣೆ ಮಾಡುವುದಷ್ಟೇ ಅಲ್ಲ, ಅವುಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಒತ್ತು ನೀಡಿಬೇಕು. ಅಂದಾಗ ಮಾತ್ರ ಉ. ಕ. ಅಭಿವೃದ್ಧಿ ಕುರಿತು ನಡೆಯುತ್ತಿರುವ ವಿಶೇಷ ಚರ್ಚೆಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹು-ಧಾ ಪೂರ್ವ ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸದನದಲ್ಲಿ ಒತ್ತಾಯಿಸಿದರು.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ಸಂದರ್ಭದಲ್ಲಿ ಸದನದ ಗಮನ ಸೆಳೆದ ಅವರು, ರಾಜ್ಯದ ಎರಡನೇ ರಾಜಧಾನಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಿಸಿಕೊಳ್ಳುವ ಧಾರವಾಡ ಜಿಲ್ಲೆ ಸಮಗ್ರ ಅಭಿವೃದ್ಧಿ ಹೊಂದದೆ ದಯನೀಯ ಸ್ಥಿತಿಯಲ್ಲಿದೆ ಎಂದರು.

ವಾಕರಸಾ ಸಂಸ್ಥೆಗೆ 1700 ಕೋ. ರೂ. ನೀಡಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಗೆ ವಿಶೇಷ ಅನುದಾನ ಮತ್ತು ಸಾರಿಗೆ ಬಸ್​ಗಳನ್ನು ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬಿಎಂಟಿಸಿಗೆ 1881, ಕೆಎಸ್​ಆರ್​ಟಿಸಿಗೆ 1141, ಕೆಕೆಆರ್​ಟಿಸಿಗೆ 1014 ಬಸ್​ಗಳನ್ನು ನೀಡಿದ್ದಾರೆ. ವಾಕರಸಾ ಸಂಸ್ಥೆಗೆ ಕೇವಲ 831 ಬಸ್ ನೀಡಲಾಗಿದೆ. ಬಿಎಂಟಿಸಿಯಲ್ಲಿ ಬಳಸಿದ ಗುಜರಿ ಬಸ್​ಗಳನ್ನು ನಮ್ಮ ಭಾಗಕ್ಕೆ ಕಳುಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ವಾಕರಸಾ ಸಂಸ್ಥೆಗೆ ಅಭಿವೃದ್ಧಿಗೆ 1700ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಕ್ರಮ ವಹಿಸಲು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net