

ಕಲಬುರಗಿ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಭಾನುವಾರ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ನೇತೃತ್ವದಲ್ಲಿ ಪಕ್ಷದ ಕಚೇರಿಯಿಂದ ಸಾವಿರಾರು ಕಾರ್ಯಕರ್ತರು, ಮುಖಂಡರು ಮೆರವಣಿಗೆ ಮೂಲಕ ಅನ್ನಪೂರ್ಣ ಕ್ರಾಸ್ ಬಳಿ ಬಂದು ಕೆಲಕಾಲ ಸಾಂಕೇತಿಕ ರಸ್ತೆ ತಡೆ ನಡೆಸಿದರು. ಬಳಿಕ ಜಗತ್ ವೃತ್ತದವರೆಗೆ ತೆರಳಿ ದಿನವಿಡೀ ಧರಣಿ ನಡೆಸಿ ನಾಚಿಕೆ ಇಲ್ಲದ ಬಿಜೆಪಿ ಸರ್ಕಾರ ಎಂದು ಜರಿದರು.
ಸರ್ಕಾರ ಪಡೆಯುತ್ತಿದ್ದ ಶೇ.40 ಪರ್ಸೆಟೇಜ್ ವಿಷಯವನ್ನು ಮೃತ ಸಂತೋಷ ಬಹಿರಂಗಪಡಿಸಿದ್ದರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಉತ್ತುಂಗಕ್ಕೆ ಏರಿದ್ದು, ಜನರ ರಕ್ತ ಹೀರುತ್ತಿರುವ ಸಕರ್ಾರ ಇದಾಗಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಉಪಾಧ್ಯಕ್ಷರಾದ ಡಾ.ಶರಣಪ್ರಕಾಶ ಪಾಟೀಲ್, ಶರಣಪ್ಪ ಮಟ್ಟೂರ, ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ಶಾಸಕ ಎಂ.ವೈ.ಪಾಟೀಲ್, ಮಾಜಿ ಶಾಸಕರಾದ ಬಿ.ಆರ್. ಪಾಟೀಲ್, ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ ಇತರರು ಮಾತನಾಡಿ, ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ನೀಲಕಂಠ ಮೂಲಗೆ, ಚಂದ್ರಿಕಾ ಪರಮೇಶ್ವರ, ಚೇತನಕುಮಾರ ಗೋನಾಯಕ, ಡಾ.ಕಿರಣ ದೇಶಮುಖ, ಸಂತೋಷ ಬಿಲಗುಂದಿ, ಈರಣ್ಣ ಝಳಕಿ, ವಾಣಿಶ್ರೀ ಸಗರಕರ್, ವಿಜಯಕುಮಾರ ಜಿ.ರಾಮಕೃಷ್ಣ, ಕೃಷ್ಣಾಜಿ ಕುಲಕರ್ಣಿ, ಸೈಯದ್ ಅಹ್ಮದ್, ಜಗದೇವಿ ಚವ್ಹಾಣ್, ಸುರೇಶ ಭರಣಿ, ಸತೀಶ ಪಿಂಟೂ ಸ್ವಾಮಿ, ಅಭಿಷೇಕ ಪಾಟೀಲ್, ಶಿವಾನಂದ ಹೊನಗುಂಟಿ ಮೊದಲಾದವರು ಪಾಲ್ಗೊಂಡಿದ್ದರು.