ಈಶಾನ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಲೆ

Bandeppa Kashempur
Published on

ಬೀದರ್: ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಗೆಲ್ಲಲ್ಲಿದ್ದು, ಈ ಮೂಲಕ ಬಿಜೆಪಿ ಸಕಾರಕ್ಕೆ ಮತದಾರರು ಎಚ್ಚರಿಕೆ ಸಂದೇಶ ರವಾನಿಸಲಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಖಾಶೆಂಪುರ ಹೇಳಿದರು.

ಕ್ಷೇತ್ರದ ವಿವಿಧೆಡೆ ತಾವು ಸಂಚರಿಸಿದ್ದು, ಶಿಕ್ಷಕ ಮತದಾರರು ಕಾಂಗ್ರೆಸ್-ಬಿಜೆಪಿಯಿಂದ ಬೇಸತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಇಬ್ಬರಿಗೂ ಪಾಠ ಕಲಿಸಲು ಜೆಡಿಎಸ್ ಬೆಂಬಲಿಸಲಿದ್ದಾರೆ. ಹೀಗಾಗಿ ಕ್ಷೇತ್ರಾದ್ಯಂತ ಪಕ್ಷದ ಪರ ಉತ್ತಮ ವಾತಾವರಣವಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅತಿವೃಷ್ಟಿಗೆ ಈ ಭಾಗ ತತ್ತರಿಸಿದೆ. ರಾಜ್ಯ ಸರ್ಕಾರ ಈವರೆಗೆ ಪರಿಹಾರ, ಪುನರ್ವಸತಿಗಾಗಿ ಹಣ ಬಿಡುಗಡೆ ಮಾಡಿಲ್ಲ. ಸಿಎಂ ಕಾಟಾಚಾರದ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಸರ್ಕಾರಕ್ಕೆ ಜನರ, ರೈತರ ನೋವು ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ನಮ್ಮ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರಿಗೆ ಶಿಕ್ಷಕರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭ್ಯರ್ಥಿ ತಿಮ್ಮಯ್ಯ ಪುರ್ಲೆ, ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಬಸವರಾಜ ಪಾಟೀಲ್ ಹಾರೂರಗೇರಿ, ಬಸವರಾಜ ಡಿಗ್ಗಾವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net