ಈರುಳ್ಳಿಗೆ ಕೊಳ್ಳಿ ಇಟ್ಟ ಸುಳಿ ಕೊಳೆ

13angB2..
Published on

ಅಣ್ಣಿಗೇರಿ: ತಾಲೂಕಿನಾದ್ಯಂತ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಬೆಳೆಗೆ ಸುಳಿ ರೋಗ ತಗುಲಿದ್ದು, ರೈತರು ಕಣ್ಣೀರು ಸುರಿಸುವಂತಾಗಿದೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದ ಈರುಳ್ಳಿ ಬೆಳೆಗೆ ರೋಗ ಲಕ್ಷಣ ಕಂಡು ಬಂದಿದ್ದರಿಂದ ಈರುಳ್ಳಿ ಚಿಗುರೊಡೆದು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿದೆ. ಈಗಾಗಲೇ ಹಲವು ಬಾರಿ ಔಷಧ ಸಿಂಪಡಿಸಿದ್ದರೂ ರೋಗ ಹತೋಟಿಗೆ ಬರುತ್ತಿಲ್ಲ.

ಸತತ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಸುಳಿ ರೋಗ ತಗುಲಿದೆ. ಔಷಧ ಸಿಂಪಡಿಸಿದರೂ ಹತೋಟಿಗೆ ಬಾರದ ಕಾರಣ ಹಲವು ಕಡೆ ಈರುಳ್ಳಿ ಬೆಳೆ ನಾಶ ಮಾಡಿ ಹಿಂಗಾರಿ ಬಿತ್ತನೆಗೆ ತಯಾರಿ ನಡೆಸಿದ್ದಾರೆ.

ಅಣ್ಣಿಗೇರಿ ತಾಲೂಕಿನ ಶಲವಡಿ, ಕೊಂಡಿಕೊಪ್ಪ, ನಾವಳ್ಳಿ, ನಲವಡಿ, ದಾಟನಾಳ, ಅಣ್ಣಿಗೇರಿ, ಮಣಕವಾಡ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಬೆಳೆಯಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಈರುಳ್ಳಿ ಕೈಗೆ ಬಾರದಂತಾಗಿದೆ.

ಶೇ. 80ರಷ್ಟು ಬೆಳೆಗೆ ರೋಗ: ತಾಲೂಕಿನಲ್ಲಿ 2966 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದ್ದು, ಸುಮಾರು 2100 ಹೆಕ್ಟೇರ್ ಪ್ರದೇಶದ ಈರುಳ್ಳಿಗೆ ಸುಳಿ ಕೊಳೆ ರೋಗ ತಗುಲಿದೆ.

ಖರ್ಚು ಕಡಿಮೆ ಆದಾಯ ಜಾಸ್ತಿ ಅಂಥ ಉಳ್ಳಾಗಡ್ಡಿ ಬಿತ್ತೆವ್ರಿ, ಆದ್ರ ಈ ಮಳೆ ರೈತನ ಜೀವಾ ಹಿಂಡಿ ಮೂಲಿಗುಂಪ ಮಾಡೈತೆ. ಒಕ್ಕಲತನದಾಗ ಹಿಂಗಾದ್ರ ಏನ್ ಉಳಿತೈತ್ರಿ. ಕೈಗೆ ಬಂದ ತುತ್ತು ಬಾಯಿಗೆ ಬರದಂಗ ಆಗೈತ್ರಿ. | ನಿಂಗಪ್ಪ ದಳವಾಯಿ ಅಣ್ಣಿಗೇರಿ ರೈತರು

ಬೆಳೆ ಹಾನಿಯಾದ ಪ್ರದೇಶಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳಿಸಲಾಗುವುದು. ಹಾನಿಗೊಳಗಾದ ರೈತರಿಗೆ ಬೆಳೆ ಪರಿಹಾರ ಘೊಷಿಸಲಾಗುವುದು. ಈಗಾಗಲೇ ಎರಡು ಬಾರಿ ಸಮೀಕ್ಷೆ ನಡೆಸಿದ್ದು, ಹಾನಿ ಕಂಡುಬಂದಿಲ್ಲ. ಈಗ ಅತಿಯಾದ ಮಳೆಯಿಂದಾಗಿ ಈರುಳ್ಳಿ ಬೆಳೆ ತಾಲೂಕಿನ ಹಲವು ಭಾಗದಲ್ಲಿ ನೆಲಕಚ್ಚಿದ್ದು, ಮತ್ತೊಂದು ಸಲ ಸಮೀಕ್ಷೆ ನಡೆಸಲಾಗುವುದು.| ಸಂಜೀವಕುಮಾರ ಗುಡಿಮನಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನವಲಗುಂದ-ಅಣ್ಣಿಗೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net