ಚಾಮರಾಜನಗರ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ ನೀಡುವ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈರುಳ್ಳಿ ಶೇಖರಣಾ ಘಟಕದಿಂದ ಈರುಳ್ಳಿಯನ್ನು 2 ರಿಂದ 3 ತಿಂಗಳವರೆಗೆ ಸಂಸ್ಕರಿಸಬಹುದು ಹಾಗೂ ಯಾವುದೇ ನಷ್ಟವಿಲ್ಲದೇ ಸಾಧ್ಯವಾದಷ್ಟು ಕಾಲ ಗೆಡ್ಡೆಗಳನ್ನು ಕಾಪಾಡಿಕೊಳ್ಳಲು ಮತ್ತು ದೂರದ ಮಾರುಕಟ್ಟೆಗೆ ಹೆಚ್ಚು ನಷ್ಟವಿಲ್ಲದೇ ವರ್ಷವಿಡೀ ಸಾಗಿಸಲು, ಮಾರುಕಟ್ಟೆ ಮಾಡಲು ಈರುಳ್ಳಿ ಶೇಖರಣಾ ಘಟಕವು ಪ್ರಮುಖವಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಹೆಚ್ಚು ನಷ್ಟವನ್ನು ತಪ್ಪಿಸಲು ಹಾಗೂ ಅನುಕೂಲ ಮಾಡಿಕೊಡಲು ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ.
ಯೋಜನೆಯಡಿ ಎಲ್ಲ ವರ್ಗದ ರೈತರಗೂ ಶೇ.50ರಷ್ಟು ಸಹಾಯಧನ ಅಂದರೆ 87,500 ರೂ. ನೀಡಲಾಗುವುದು. ಇಲಾಖೆಯ ಮಾರ್ಗಸೂಚಿಯಂತೆ ಈರುಳ್ಳಿ ಶೇಖರಣಾ ಘಟಕವು 12 ಮೀಟರ್ ಉದ್ದ 3.60 ಮೀ ಅಗಲ 1.80 ಮೀ (ಬದಿಯ ಎತ್ತರ) 2.10 ಮೀ (ಮಧ್ಯದ ಎತ್ತರ) ಇದ್ದು, 90 ಘ.ಮೀ ಒಳಾಂಗಣ ಸಾಮರ್ಥ್ಯವನ್ನು ಹೊಂದಿರಬೇಕು. ಕನಿಷ್ಟ 0.40 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆದಿರಬೇಕು.
ಆಸಕ್ತ ರೈತರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ನಮೂನೆ, ಭಾವಚಿತ್ರ, ಪ್ರಸ್ತುತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಗಣಕೀಕೃತ ಬೆಳೆ ಧೃಢೀಕರಣ ಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ರೈತರಾದಲ್ಲಿ ಆರ್‌ಡಿ ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರ, ಇನ್ನಿತರ ದಾಖಲೆಗಳನ್ನು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಮೇ 31ರೊಳಗೆ ಸಲ್ಲಿಸಿ ಕಾರ್ಯದೇಶ ಪಡೆದ ನಂತರ ಕಾಮಗಾರಿ ಪ್ರಾರಂಭಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.