

ಕಲಬುರಗಿ: ಸದಾ ಸುದ್ದಿ ಮಾಡುವ ಈರುಳ್ಳಿಗೂ ಕರೊನಾ ಹೊಡೆತ ಬಿದ್ದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮಾರಬೇಕಾದ ಈರುಳ್ಳಿ ಮಾರಾಟವಾಗದೇ ರೈತರು ಇಲ್ಲಿಯೂ ಕೈ ಸುಟ್ಟುಕೊಳ್ಳುವಂತಾಗಿದೆ.
ಕಳೆದ ವರ್ಷ ಬೆಲೆ ಕೈಗೆಟುಕದ ರೀತಿಯಲ್ಲಿ ಗಗನಕ್ಕೇರಿತ್ತು. ಈ ಸಲ ಭಾರಿ ಪ್ರಮಾಣದಲ್ಲಿ ಕುಸಿದಿದೆಯಷ್ಟೆ ಅಲ್ಲ ಈರುಳ್ಳಿಯನ್ನು ಕೇಳುವವರಂತೇ ಇಲ್ಲದಂತಾಗಿದೆ. ಕರೊನಾ ಬಿಸಿ ಈ ಬೆಳೆಗೂ ಬಲವಾಗಿ ತಟ್ಟಿದೆ ಎನ್ನುತ್ತಾರೆ ರಟಕಲ್ನ ರೈತ ಸಂಜೀವಕುಮಾರ ಪಡಶೆಟ್ಟಿ.
ಎರಡು ಎಕರೆ ಹೊಲದಲ್ಲಿ ಉಳ್ಳಾಗಡ್ಡೆ ಬೆಳೆದಿದ್ದೆ. ಮಾರಾಟವಾಗದೇ ಹೊಲದಲ್ಲಿ ಕೊಳೆಯುತ್ತಿವೆ. ಮಾರುಕಟ್ಟೆಯಲ್ಲಿ ಈರುಳ್ಳಿ ಸಿಗದಿರುವುದಕ್ಕೆ ಬೆಲೆ ಹೆಚ್ಚಾಗುತ್ತಿದ್ದರೆ, ರೈತರು ಬೆಳೆದ ಬೆಳೆ ಮಾರಾಟವಾಗದೆ ಹಾಳಾಗುತ್ತಿರುವುದು ಇನ್ನೊಂದು ಕಡೆ. ರೈತರು ಬೆಳೆದ ಬೆಳೆಗಳನ್ನು ಸರ್ಕಾರ ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು.
200 ರೂಪಾಯಿಗೆ ಒಂದು ಕೆಜಿಯಂತೆ ಈರುಳ್ಳಿ ಖರೀದಿಸಲಾಗಿತ್ತು. ಉತ್ತಮ ಬೆಳೆ ಬಂದಿದೆ ಆರಾಮವಾಗಿರಬಹುದು ಈ ವರ್ಷ ಎಂದು ಭಾವಿಸಿದ್ದ ರೈತರಿಗೆ ಕರೊನಾ ಮಹಾಮಾರಿ ನಲುಗುವಂತೆ ಮಾಡಿದೆ.
ಲಕ್ಷಾಂತರ ರೂ. ಸಾಲ ಮಾಡಿ ರೈತರು ಈರುಳ್ಳಿ ಬೆಳೆದಿದ್ದಾರೆ. ಮಾರಾಟವಾಗದೇ ಹೊಲಗಳಲ್ಲಿ ರಾಶಿ ಹಾಕಿಕೊಂಡಿದ್ದಾರೆ, ಮಳೆ ಬಂದರೆ ಎಲ್ಲ ಈರುಳ್ಳಿಗಳು ಕೊಳೆತು ಹೋಗುತ್ತವೆ. ಸರ್ಕಾ ರ ಮಧ್ಯಪ್ರವೇಶಿಸಿ ರೈತರು ಬೆಳೆದ ಬೆಳೆ ಖರೀದಿಸಬೇಕು.
| ಶರಣಬಸಪ್ಪ ಮಮಶೆಟ್ಟಿ, ಸಿಪಿಐಎಂ ಮುಖಂಡ