ಈರುಳ್ಳಿ ಬೆಳೆಗೆ ತಿರುಗಣಿ ಕಾಟ!

14manju1b
ಯರಗಟ್ಟಿಯಲ್ಲಿ ಟ್ವಿಸ್ಟರ್ ರೋಗ ತಗುಲಿ ಈರುಳ್ಳಿ ಬೆಳೆ ನೆಲಕಚ್ಚಿರುವುದು.
Published on

ಬೆಳಗಾವಿ: ಲಾಕ್‌ಡೌನ್‌ನಿಂದ ಮಾರುಕಟ್ಟೆಯಲ್ಲಿ ದರ ಕುಸಿತ, ಕೀಟನಾಶಕಗಳ ದರ ಏರಿಕೆ ಮತ್ತಿತರ ಸಮಸ್ಯೆಗಳಿಂದ ರೈತರು ಹೈರಾಣಾಗಿರುವ ಬೆನ್ನಲ್ಲೇ ಈರುಳ್ಳಿಗೆ ‘ಟ್ವಿಸ್ಟರ್ (ತಿರುಗಣಿ)ರೋಗ’ ವಕ್ಕರಿಸಿದ್ದು, ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿದೆ.

ತೇವಾಂಶ ಹೆಚ್ಚಳದಿಂದ ರೋಗ ಉಲ್ಬಣ: ಮುಂಗಾರು ಹಂಗಾಮಿನ ಪೂರ್ವದಲ್ಲಿಯೇ ಮಳೆ ಆರಂಭವಾಗಿರುವುದು ಮತ್ತು ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಏರಿಕೆ ಕಂಡಿದ್ದರಿಂದ ಜಿಲ್ಲೆಯಲ್ಲಿ ಕಪ್ಪು ಮಣ್ಣು ಹೊಂದಿರುವ ಗ್ರಾಮಗಳ ರೈತರು ಮೇ ಕೊನೆಯ ವಾರ ಮತ್ತು ಜೂನ್‌ನಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಆದರೆ, ಜುಲೈನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಈರುಳ್ಳಿಗೆ ವಿವಿಧ ರೋಗಗಳು ತಗುಲಿದೆ. ಅದರಲ್ಲೂ ಟ್ವಿಸ್ಟರ್ ರೋಗ ತಗುಲಿದ್ದು, ಬೆಳೆಗಾರರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಜಿಲ್ಲೆಯ ಸವದತ್ತಿ, ರಾಮದುರ್ಗ, ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ ಸೇರಿ ವಿವಿಧ ಭಾಗಗಳಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರು ಪ್ರಸಕ್ತ ವರ್ಷ 4,200 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಅದರಲ್ಲಿ ಕೆಲ ರೈತರು ಕಬ್ಬಿನ ಬೆಳೆ ಜತೆಗೆ ಮಿಶ್ರ ಬೆಳೆಯಾಗಿ, ಕೆಲ ರೈತರು ಏಕ ಬೆಳೆಯಾಗಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಆದರೆ, ಎರಡು ವಾರಗಳಿಂದ ಬಿಟ್ಟೂಬಿಡದೆ ಮಳೆ ಸುರಿಯುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆ ವಿವಿಧ ರೋಗಗಳಿಗೆ ತುತ್ತಾಗುತ್ತಿದೆ.

ರೋಗದಿಂದ ಇಳುವರಿಗೆ ಪೆಟ್ಟು: 2019ರ ಈಚೆಗೆ ಈರುಳ್ಳಿ ಬೆಳೆಗೆ ಟ್ವಿಸ್ಟರ್ ಎಂಬ ರೋಗ ಕಾಣಿಸಿಕೊಳ್ಳುತ್ತಿದೆ. 2020ರಲ್ಲಿ ಸವದತ್ತಿ ತಾಲೂಕಿನ ಯರಗಟ್ಟಿ ಹೋಬಳಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕೆಲ ಭಾಗಗಳಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿಯಲ್ಲಿ ಈ ರೋಗ ಕಂಡು ಬಂದಿದೆ. ಟ್ವಿಸ್ಟರ್ ರೋಗವು ವಿಸ್ತರಣೆಯಾಗುತ್ತ ಕಾಂಡದ ಭಾಗವು ತಿರುಚಿಕೊಂಡಂತಾಗಿ ನೆಲಕ್ಕೆ ಬೀಳುತ್ತದೆ. ರೋಗದ ತೀವ್ರತೆ ಹೆಚ್ಚಾದರೆ ಸುಟ್ಟಂತೆ ಆಗಿ ಬೆಳವಣಿಗೆ ಕುಂಠಿತವಾಗುತ್ತದೆ. ಈ ರೋಗವು ಬೀಜ ಬಿತ್ತನೆ ಮಾಡಿದ 40 ರಿಂದ 50 ದಿನಗಳ ಬಳಿಕ ರೋಗ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಔಷಧ ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರಬಹುದು. ಆದರೆ, ಈರುಳ್ಳಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುವುದಿಲ್ಲ ಎನ್ನುತ್ತಾರೆ ಈರುಳ್ಳಿ ಬೆಳೆಗಾರರು.

ಭೂಮಿಯಲ್ಲಿ ನೀರಿನ ತೇವಾಂಶ ಹೆಚ್ಚಾದ ಸಂದರ್ಭದಲ್ಲಿ ಈರುಳ್ಳಿ ಬೆಳೆಗೆ ಇಂತಹ ರೋಗಗಳು ಕಂಡುಬರುತ್ತವೆ. ಹಾಗಾಗಿ, ರೈತರು ರೋಗ ಬರುವ ಮುನ್ನವೇ ಔಷಧ ಸಿಂಪಡಿಸಿ ನಿಯಂತ್ರಿಸಬಹುದು. ಈಗಾಗಲೇ ಈ ರೋಗ ಹರಡಲು ಪ್ರಮುಖ ಕಾರಣ ಕುರಿತು ತೋಟಗಾರಿಕೆ ವಿವಿಯ ವಿಜ್ಞಾನಿಗಳ ಜತೆ ಇಲಾಖೆಯ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ವಿನಾಯಕ ಪಾಟೀಲ ತಿಳಿಸಿದ್ದಾರೆ.

ಭೂಮಿಯಲ್ಲಿ ನೀರಿನ ತೇವಾಂಶ ಹೆಚ್ಚಾದರೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಈರುಳ್ಳಿ ಬೆಳೆಗೆ ‘ಟ್ವಿಸ್ಟರ್ (ತಿರುಗಣಿ) ಕಂಡುಬರುತ್ತಿದೆ. ಮುಂಜಾಗ್ರತೆಯಿಂದ ರೈತರು ಔಷಧ ಸಿಂಪಡಣೆ ಮೂಲಕ ರೋಗ ನಿಯಂತ್ರಿಸಬಹುದು. ಈ ರೋಗ ಕುರಿತು ಸಂಶೋಧನೆ ನಡೆಯುತ್ತಿರುವುದರಿಂದ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ತೇವಾಂಶ ಕಡಿಮೆ ಮಾಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.| ಮಂಜುನಾಥ ಚೌರಡ್ಡಿ ಕೃಷಿ ತಜ್ಞರು, ಬೆಳಗಾವಿಭೂಮಿಯಲ್ಲಿ ನೀರಿನ ತೇವಾಂಶ ಹೆಚ್ಚಾದಂತೆ ಈರುಳ್ಳಿ ಬೆಳೆ ಬೇರುಗಳು ಒಣಗುತ್ತಾ ಹೋಗಿ ನಾಶವಾಗುತ್ತಿದೆ. ಅಲ್ಲದೆ, ಈ ರೋಗ ಈರುಳ್ಳಿಗೆ ತಗುಲಿದ ಬಳಿಕ ಕಾಂಡದ ಭಾಗವು ಸಂಪೂರ್ಣ ತಿರುಚಿಕೊಂಡು ನೆಲಕ್ಕೆ ಬೀಳುತ್ತದೆ. ರೋಗದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.| ಮುದಕಪ್ಪ ದೇವರಡ್ಡಿ ಈರುಳ್ಳಿ ಬೆಳೆಗಾರ, ಯರಗಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net