ಈರುಳ್ಳಿ ಬೀಜೋತ್ಪಾದನೆಯಿಂದ ಹೆಚ್ಚಿನ ಆದಾಯ

CTD 14 ONION---05
Published on

ಚಿತ್ರದುರ್ಗ: ಬೀಜೋತ್ಪಾದನೆ ಉತ್ತಮ ಆದಾಯಕ್ಕೆ ಪೂರಕವಾಗಿದ್ದು, ಈರುಳ್ಳಿ ಬೆಳೆಗಾರರು ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಹಿರಿಯೂರು ತಾಲೂಕು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಒ.ಕುಮಾರ ಹೇಳಿದರು.
ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಹಿರಿಯೂರು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕು ಚಿಪ್ಪಿನಕೆರೆ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಈರುಳ್ಳಿ ಬೀಜೋತ್ಪಾದನೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೀಜೋತ್ಪಾದನೆ ಉತ್ತೇಜಿಸಲು, ಕೆವಿಕೆ ತಾಯಿ ಬೀಜವನ್ನು ಪುಣೆಯಿಂದ ತಂದು ಜಿಲ್ಲೆಯ ಹತ್ತು ರೈತರಿಗೆ ತಲಾ ಐದು ಕೆ.ಜಿ.ವಿತರಿಸಲಾಗಿತ್ತು. ಮುಂಗಾರು, ಹಿಂಗಾರಲ್ಲಿ ಬೀಜೋತ್ಪಾದನೆ ಮಾಡಬಹುದಾಗಿದೆ ಎಂದರು.
ಈರುಳ್ಳಿ ಬೆಳೆದರೆ ಒಂದು ಹೆಕ್ಟೇರ್‌ಗೆ ಖರ್ಚು ಕಳೆದು 50-60 ಸಾವಿರ ರೂ. ಲಾಭ ಸಿಗಬಹುದು. ಆದರೆ, ಉತ್ತಮ ಗುಣಮಟ್ಟದ ಬೀಜೋತ್ಪಾದನೆ ಹಾಗೂ ಅದಕ್ಕೆ ಒಳ್ಳೆಯ ದರ ದೊರೆತರೆ ಒಂದು ಹೆಕ್ಟೇರ್‌ಗೆ 8-10 ಲಕ್ಷ ರೂ. ಆದಾಯ ಗಳಿಸಬಹುದಾಗಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಪಿ.ಎಸ್.ಮಹಾಂತೇಶ್ ಮಾತನಾಡಿ, ಈರುಳ್ಳಿ ವಿಸ್ತೀರ್ಣದಲ್ಲಿ ಕರ್ನಾಟಕ ಮೊದಲ ಹಾಗೂ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಚಿತ್ರದುರ್ಗದ 40 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಅಡಕೆ ಬೆಳೆ ವಿಸ್ತರಣೆಯಿಂದ ಈರುಳ್ಳಿ ಬೆಳೆ ಕಡಿಮೆಯಾಗುತ್ತಿದೆ ಎಂದರು.
ಕೆವಿಕೆ ಹಿರಿಯ ತಾಂತ್ರಿಕ ಅಧಿಕಾರಿ ಬಿ.ಎನ್.ಗೀತಾಕುಮಾರಿ, ಚಿಕ್ಕಗೊಂಡನಹಳ್ಳಿ ಗ್ರಾಪಂ ಸದಸ್ಯ ಡಿ.ಆರ್.ಪ್ರದೀಪ್‌ಬಾಬು, ಈರುಳ್ಳಿ ಬೆಳೆಗಾರ ಕೆ.ಅಶೋಕ್ ಹಾಗೂ ಗ್ರಾಮಸ್ಥರು ಇದ್ದರು.

*ಕೋಟ್
ಪ್ರತಿಯೊಬ್ಬ ರೈತರು ತಮಗೆ ಬೇಕಾದ ಅಗತ್ಯ ಬೀಜ ಬೆಳೆದುಕೊಳ್ಳಬೇಕು. ಹೆಚ್ಚಿನ ಬೀಜವನ್ನು ಅಕ್ಕಪಕ್ಕದ ರೈತರಿಗೆ ಮಾರಾಟ ಮಾಡಬಹುದು, ಅನವಶ್ಯಕವಾಗಿ ಔಷಧ ಬಳಸಬಾರದು, ಪೋಷಕಾಂಶ ನಿರ್ವಹಣೆ ಮಾಡಬೇಕು.
ಡಾ.ಎಸ್.ಓಂಕಾರಪ್ಪ, ಕೆವಿಕೆ ಸಸ್ಯ ಸಂರಕ್ಷಣೆ ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net