

ಹುಬ್ಬಳ್ಳಿ : ಹುಬ್ಬಳ್ಳಿಯ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಹಿಂದು ಸಂಘಟನೆಗಳು ವಿರೋಧ ವ್ಯಕ್ತಪಡಿಸಿಲ್ಲ. ಹೀಗಾಗಿ, ಅಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಯಾರೂ ಅಡ್ಡಿಪಡಿಸಬಾರದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.
ರಾಣಿ ಚನ್ನಮ್ಮ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಇಲ್ಲಿನ ಪಾಲಿಕೆ ಕಚೇರಿಯಲ್ಲಿ ಶುಕ್ರವಾರದಂದು ಉಪ ಮಹಾಪೌರ ಉಮಾ ಮುಕುಂದ ಅವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಣಿ ಚನ್ನಮ್ಮ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗಾಗಿ ಒಮ್ಮತದ ನಿರ್ಣಯ ಬರಲು ಸಮಿತಿ ರಚಿಸಲಾಗಿದೆ. ಈ ಸಮಿತಿ ಸಕಾರಾತ್ಮಕ ವರದಿ ಕೊಡುವ ವಿಶ್ವಾಸ ಇದೆ. ಈ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಕಳೆದ ಆರೇಳು ವರ್ಷಗಳಿಂದ ಮನವಿ ಕೊಡುತ್ತ ಬರಲಾಗಿದೆ. ಇದೀಗ, ನೆಪಮಾತ್ರಕ್ಕೆ ಸಮಿತಿ ರಚಿಸಲಾಗಿದೆ. ಸಮಿತಿ ರಚನೆಯ ಅಗತ್ಯವೇ ಇರಲಿಲ್ಲ ಎಂದರು.
ಒಂದು ವೇಳೆ ಸಮಿತಿ ನಕಾರಾತ್ಮಕ ವರದಿ ಕೊಟ್ಟರೆ ಒತ್ತಾಯಪೂರಕವಾಗಿಯಾದರೂ ಸರಿ, ಆ ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ. ಇದಕ್ಕಾಗಿ ಪೊಲೀಸರ ಲಾಠಿ ಏಟಿಗಾಗಿ ಆಗಲಿ ಅಥವಾ ಗುಂಡೇಟಿಗಾಗಿ ಆಗಲಿ ಹೆದರುವುದಿಲ್ಲ ಎಂದು ಸವಾಲು ಹಾಕಿದರು.
ಸೋಮವಾರದಂದು ಸಮಿತಿ ತನ್ನ ವರದಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಈಗಾಗಲೇ ಸಾಕಷ್ಟು ತಡವಾಗಿದೆ. ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಪರವಾನಿಗೆ ಸಿಗದಿದ್ದರೆ ನಮಾಜ್‌ಗೂ ಅಡ್ಡಿಪಡಿಸುತ್ತೇವೆ. ಗಣೇಶೋತ್ಸವಕ್ಕೆ ಅಡ್ಡಿಪಡಿಸಿದರೆ ರಾಜಕೀಯ ಪಕ್ಷಗಳಿಗೆ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು.
ಚಾಮರಾಜಪೇಟೆಯ ಈದ್ಗಾದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸರ್ಕಾರ ನ್ಯಾಯಾಲಯಕ್ಕೆ ಸೂಕ್ತ ದಾಖಲೆ ನೀಡುವಲ್ಲಿ ವಿಲವಾಗಿದೆ. ಸರ್ಕಾರ ದ್ವಿಪೀಠಕ್ಕೆ ಅಪೀಲು ಸಲ್ಲಿಸಿದೆ. ಅಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದರು.