ಈಡುಗಾಯಿ ಒಡೆದು ವಿಭಿನ್ನ ಪ್ರತಿಭಟನೆ: ಕನ್ನಡಿಗರ ಬೇಡಿಕೆ ಈಡೇರಿಗೆ ವಾಟಾಳ್ ನಾಗರಾಜ್ ಆಗ್ರಹ

mysore
Published on

ಮೈಸೂರು: ಕನ್ನಡಿಗರ ಸಮಗ್ರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ಶನಿವಾರ ಈಡುಗಾಯಿ ಒಡೆದು ವಿಭಿನ್ನವಾಗಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡಿಗರ ಬೇಡಿಕೆ ಈಡೇರಿಸಬೇಕು ಎಂಬ ಕಾರಣಕ್ಕಾಗಿ ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಚಳವಳಿ ಕೈಗೊಂಡಿದ್ದು, ಬೆಂಗಳೂರಿನಿಂದ ಮೈಸೂರಿನವರೆಗೆ ಈಡುಗಾಯಿ ಒಡೆದಿದ್ದು. ಮೇ 31ರಂದು ವಿಜಯಪುರ, ಹುಬ್ಬಳ್ಳಿ, ಧಾರವಾಡ ರಾಜ್ಯದ ವಿವಿಧ ಭಾಗದಲ್ಲೂ ಈಡುಗಾಯಿ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.

ಇಲ್ಲಿಯವರೆಗೆ ಆಡಳಿತ ನಡೆದ ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳು ಗಡಿನಾಡು ಪ್ರದೇಶವನ್ನು ನಿರ್ಲಕ್ಷೃ ಮಾಡಿವೆ. ಕಾಸರಗೋಡಿನ ಶಾಲೆಗಳಲ್ಲಿ ಕನ್ನಡ ಅಲಕ್ಷೃ ಮಾಡಲಾಗುತ್ತಿದೆ. ಹೊಸೂರು, ತಾಳವಾಡಿ, ಮಡಗಸಿರಿ, ಸೊಲ್ಲಾಪುರದಲ್ಲೂ ಇದೇ ಪರಿಸ್ಥಿತಿ ಇದೆ. ಬೆಳಗಾವಿಯಲ್ಲಿ ಮರಾಠಿಗರ ಅಬ್ಬರ ಹೆಚ್ಚಾಗಿದೆ. ಆದರೆ, ಸರ್ಕಾರ ಈ ಬಗ್ಗೆ ತಲೆ ಕಡೆಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಮುಂದಿನ ತಿಂಗಳು ಚಾಮರಾಜನಗರ, ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟಿಸಲಾಗುವುದು. ರಾಜ್ಯಪಾಲರು ಹಿಂದಿಯಲ್ಲೇ ಭಾಷಣ ಮಾಡುತ್ತಿದ್ದರೂ, ಜನಪ್ರತಿನಿಧಿಗಳು ಆ ಬಗ್ಗೆ ಆಕ್ಷೇಪಿಸುತ್ತಿಲ್ಲ. ಕನ್ನಡದಲ್ಲಿ ಭಾಷಣ ಮಾಡಲು ಸಾಧ್ಯವಾಗದಿದ್ದರೆ ಅವರನ್ನು ರಾಷ್ಟ್ರಪತಿಯವರು ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರವು ಕನ್ನಡಿಗರನ್ನು ಕಡೆಗಣಿಸಿದೆ. ರೈಲ್ವೆ, ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ರಾಜ್ಯದ ಗಡಿಗಳು ಪ್ರಗತಿಯಾಗಬೇಕು. ಚಾಮರಾಜನಗರಕ್ಕೆ ತೆರಳಿದರೆ ಪದವಿ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಅಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಮಹದೇಶ್ವರ ಬೆಟ್ಟದಲ್ಲಿ ನಡೆಸಲಾಯಿತು. ಆದರೂ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಿಲ್ಲ ಎಂದು ಕಿಡಿಕಾರಿದರು.

ಎಂಎಲ್‌ಸಿ ಸ್ಥಾನಕ್ಕಾಗಿ 25 ಕೋಟಿ ರೂ. ನಿಗದಿಪಡಿಸಲಾಗಿದೆ. ಸದನಕ್ಕೆ ಗೌರವ ತರುವವರನ್ನು ಆಯ್ಕೆ ಮಾಡಿ ಎಂದು ಮುಖ್ಯಮಂತ್ರಿಗೆ ತಿಳಿಸಿದೆ ಎಂದರು. ನಗರದ ದೊಡ್ಡಗಡಿಯಾರದ ಹೆಸರನ್ನು ಮಹಾವೀರ ವೃತ್ತ ಎಂದು ಬದಲಾಯಿಸುವುದಕ್ಕೆ ನಮ್ಮ ಆಕ್ಷೇಪ ಇದೆ. ಈ ಪ್ರಕ್ರಿಯೆ ಮುಂದುವರಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡ ಹೋರಾಟಗಾರರಾದ ಶಿವಶಂಕರ್, ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಪಾರ್ಥಸಾರಥಿ, ರಾಘವೇಂದ್ರ, ಜಿಯಾ, ಮಧುವನ ಚಂದ್ರು, ನೇಹಾ, ವರಕೂಡು ಕೃಷ್ಣೇಗೌಡ, ಪ್ರಭುಶಂಕರ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net