

ಸಾಗರ: ಇಂದು ವಿಜ್ಞಾನದ ಯುಗಕ್ಕೆ ಕಾಲಿಡುತ್ತಿದ್ದೇವೆ, ಸಂಸ್ಕೃತಿ ಬದಲಾಗುತ್ತಿದೆ. ಈಡಿಗ ಸಮುದಾಯ ಹಳೆಯ ವಿಚಾರ ಧಾರೆಗಳಲ್ಲಿರುವ ಗಟ್ಟಿತನವನ್ನು ಕಾಪಾಡಿಕೊಂಡು ಹೋಗಬೇಕಾದ ಅವಶ್ಯಕತೆಯಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ನಗರದ ಆರ್ಯ ಈಡಿಗರ ಸಭಾಭವನದಲ್ಲಿ ಭಾನುವಾರ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯದ ಕಲೆಗಳನ್ನು ಉಳಿಸಿಕೊಳ್ಳುವಲ್ಲಿ ಸಹ ಪ್ರಯತ್ನ ಮಾಡಬೇಕಾಗಿದೆ ಎಂದರು.
ಬದಲಾದ ದಿನಗಳಲ್ಲಿ ಈಡಿಗ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ, ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದು. ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆ. ಉನ್ನತ ಸ್ಥಾನದಲ್ಲಿರುವ ಸಮಾಜ ಬಾಂಧವರು ತಮ್ಮ ಜತೆ ಸಮುದಾಯವನ್ನು ತೆಗೆದುಕೊಂಡು ಹೋಗುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಒಂದು ಕಾಲದಲ್ಲಿ ಈಡಿಗ ಸಮುದಾಯ ವಿದ್ಯೆಯಿಂದ ವಂಚಿತವಾಗಿತ್ತು, ಈಗ ಶಿಕ್ಷಣದಲ್ಲಿಯೂ ಯಶಸ್ಸು ಕಾಣುತ್ತಿದ್ದೇವೆ. ಬದಲಾವಣೆಗೆ ಹೊಂದಿಕೊಂಡು ಸಿಗುವ ಅವಕಾಶಗಳನ್ನು ಬಳಕೆ ಮಾಡಿಕೊಂಡು ಇನ್ನಷ್ಟು ಸದೃಢವಾಗಿ ಸಂಘಟನೆಯನ್ನು ಕಟ್ಟುವತ್ತ ಗಮನಹರಿಸಬೇಕು. ಮೀಸಲಾತಿ ಇದ್ದರೂ ಸಾಕಷ್ಟು ಪೈಪೋಟಿ ಇದ್ದು ಉನ್ನತ ವಿದ್ಯಾಭ್ಯಾಸದ ಮೂಲಕ ಇನ್ನಷ್ಟು ಜನರು ಸರ್ಕಾರಿ ಸೇವೆಗೆ ಸೇರುವಂತೆ ಆಗಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಬೆನ್ನುತಟ್ಟುವ ಕೆಲಸ ಮಾಡಿದ್ದು ಶ್ಲಾಘನೀಯ ಎಂದರು.