

ಚಿತ್ರದುರ್ಗ: ಕುಲಶಾಸ್ತ್ರ ಅಧ್ಯಯನ ತ್ವರಿತವಾಗಿ ಆರಂಭಿಸಿ, ಈಡಿಗ ಸಮಾಜವನ್ನು ಎಸ್ಟಿ ಮೀಸಲು ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ವಾರ್ಷಿಕ 250 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು. ನಿಗಮಕ್ಕೆ ಅನುದಾನ ನೀಡುವ ಜತೆಗೆ, ಅಧ್ಯಕ್ಷರು ಹಾಗೂ ಸದಸ್ಯರನ್ನು 15 ದಿನದೊಳಗೆ ಆಯ್ಕೆ ಮಾಡಬೇಕು. ಅನರ್ಹರ ಬದಲಾಗಿ ಸಮಾಜಕ್ಕೆ ದುಡಿವವರಿಗೆ ಇಲ್ಲಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಪುತ್ಥಳಿ ನಿರ್ಮಿಸಬೇಕು. ಅವರ ಹೆಸರಿನಲ್ಲಿ ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಉತ್ತರ ಕನ್ನಡ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಪ್ರಾರಂಭಿಸಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಲ್ಲೂ ಅವರ ಸಿದ್ಧಾಂತಗಳನ್ನು ಬೋಧಿಸಲು ಪಠ್ಯದಲ್ಲಿ ಅಳವಡಿಸಬೇಕು. ಹೆಂಡದ ಮಾರಯ್ಯ ಜಯಂತಿ ಸರ್ಕಾರದಿಂದಲೇ ಆಚರಿಸಬೇಕು ಎಂದು ಒತ್ತಾಯಿಸಿದರು.
ಕುಲಕಸುಬು ಸೇಂದಿ-ನೀರಾ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು. ಸರ್ಕಾರಿ ಜಾಗದಲ್ಲಿ ಈಚಲು, ತಾಳೆ, ಬೈನೆ ಹಾಗೂ ತೆಂಗಿನ ಮರಗಳನ್ನು ಸರ್ಕಾರದ ಖರ್ಚಿನಲ್ಲಿ ಬೆಳೆಸಿ ಸಮುದಾಯದ ಮಕ್ಕಳಿಗೆ ಸ್ವ-ಉದ್ಯೋಗ ಮಾಡಲು ಅವಕಾಶ ಮಾಡಿಕೊಡಬೇಕು. ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರಿಡಬೇಕು. ಸಮುದಾಯದ ಹಿರಿಯ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಇವು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸಲಾಗಿದೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಕಾಂಗ್ರೆಸ್ ಸರ್ಕಾರ ಗಮನ ಹರಿಸಬೇಕು. ನಿರ್ಲಕ್ಷಿಸಿದರೆ, ಸಮಾಜ ಬೀದಿಗಿಳಿಯಲಿದೆ ಎಂದು ಎಚ್ಚರಿಸಿದರು.
ಸಮುದಾಯದ ಮುಖಂಡರಾದ ಗಾಯತ್ರಿ, ತಿಪ್ಪೇಶ್, ಶ್ರೀನಿವಾಸ್, ರಾಘವೇಂದ್ರ, ಮನು, ಸಂದೀಪ್, ನಂದೀಶ್ ಇದ್ದರು.