ಈಡಿಗ ಸಮಾಜದ 12 ಬೇಡಿಕೆ ಈಡೇರಿಸದಿದ್ದರೆ ಹೋರಾಟ- ಡಾ.ಮಂಚೇಗೌಡ ಎಚ್ಚರಿಕೆ

IMG-20230626-WA0069.jpg
Published on

ದಾವಣಗೆರೆ: ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ವಾರ್ಷಿಕ 250 ಕೋಟಿ ರೂ. ಅನುದಾನ ಸೇರಿ 12 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಗಮನ ಹರಿಸಬೇಕೆಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಮಂಚೇಗೌಡ ಆಗ್ರಹಿಸಿದರು.

ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಹೊಂದಿರುವ ಈಡಿಗ ಸಮಾಜದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ರಾಷ್ಟ್ರೀಯ ಈಡಿಗ ಮಹಾಮಂಡಳಿ, ರಾಷ್ಟ್ರೀಯ ಈಡಿಗ ಬಿಲ್ಲವ, ಈಡಿಗ ದೀವರ , ಈಡಿಗ ನಾಮಧಾರಿ ಮಹಾಮಂಡಳಿಗಳೊಂದಿಗೆ ಮುಂಬರುವ ದಿನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಈಡಿಗ ನಿಗಮಕ್ಕೆ ಅನುದಾನ ನೀಡುವ ಜತೆಗೆ, ಅದ್ಯಕ್ಷರು ಹಾಗೂ ಸದಸ್ಯರನ್ನು 15 ದಿನದಲ್ಲಿ ಆಯ್ಕೆ ಮಾಡಬೇಕು. ಅನರ್ಹರ ಬದಲಾಗಿ ಸಮಾಜಕ್ಕೆ ದುಡಿವವರಿಗೆ ಇಲ್ಲಿ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

ಹಿಂದಿನ ಸರ್ಕಾರ ಆದೇಶ ಮಾಡಿದ್ದ ಕುಲಶಾಸ್ತ್ರ ಅಧ್ಯಯನವನ್ನು ಪ್ರಾರಂಭಿಸಬೇಕು. ಈಡಿಗ ಸಮಾಜವನ್ನು ಎಸ್ಟಿ ಮೀಸಲು ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

ಕುಲಕಸುಬು ಸೇಂದಿ-ನೀರಾ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು. ಬ್ರಹ್ಮಖ್ಛ್ಟಐ ನಾರಾಯಣ ಗುರು ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಸ್ಥಾಪಿಸಬೇಕು. ಅವರ ಹೆಸರಿನಲ್ಲಿ ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಐಎಎಸ್,ಐಪಿಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಉತ್ತರ ಕನ್ನಡ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಪ್ರಾರಂಭಿಸಬೇಕು.

12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಗುರುತಿಸಿಕೊಂಡಿರುವ ಶ್ರೀ ಹೆಂಡದ ಮಾರಯ್ಯನವರ ಜಯಂತ್ಯುತ್ಸವ ಆರಂಭಿಸಬೇಕು. ಸಮುದಾಯದ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ಕಾನೂನು ಗೊಂದಲಗಳನ್ನು ದೂರ ಮಾಡಿ ಧರ್ಮದರ್ಶಿ ಡಾ. ರಾಮಪ್ಪನವರ ನೇತೃತ್ವದಲ್ಲಿ ಸುಸೂತ್ರವಾಗಿ ನಡೆಸಲು ಅವಕಾಶ ಮಾಡಬೇಕು.

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿಯೂ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಬೋಧಿಸಲು ಪಠ್ಯದಲ್ಲಿ ಅಳವಡಿಸಬೇಕು. ಸಮಾಜದ ಸಂಘಟನೆ ದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕುಲಬಾಂಧವರ ಚಿಂತನ ಶಿಬಿರ ನಡೆಸಿ, ಸಾಮಾಜಿಕ ರಾಜಕೀಯದ ಅರಿವನ್ನು ಮೂಡಿಸಬೇಕು.

ಸರ್ಕಾರಿ ಜಾಗದಲ್ಲಿ ಈಚಲು, ತಾಳೆ, ಬೈನೆ ಹಾಗೂ ತೆಂಗಿನ ಮರಗಳನ್ನು ಸರ್ಕಾರದ ಖರ್ಚಿನಲ್ಲಿ ಬೆಳೆಸಿ ಸಮುದಾಯದ ಮಕ್ಕಳಿಗೆ ಸ್ವಉದ್ಯೋಗ ಮಾಡಲು ಅವಕಾಶ ಮಾಡಿಕೊಡಬೇಕು. ಶಿವಮೊಗ್ಗ ಜಿಲ್ಲೆಯ ನೂತನ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಹೆಸರಿಡಬೇಕು. ಸಮುದಾಯ ಹಿರಿಯ ರಾಜಕಾರಣಿ ಬಿ. ಕೆ. ಹರಿಪ್ರಸಾದ್ ಅವರನ್ನು ಕಡೆಗಣಿಸದೆ ಸ್ಥಾನಮಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸಲಾಗಿದೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಕಾಂಗ್ರೆಸ್ ಸರ್ಕಾರ ಗಮನ ಹರಿಸಬೇಕು. ನಿರ್ಲಕ್ಷಿಸಿದರೆೆ ಸಮಾಜ ಬೀದಿಗಿಳಿಯಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಚ್.ವೈ.ಆನಂದ, ಆರ್. ಪ್ರತಾಪ್, ಟಿ.ಆರ್.ಜ್ಞಾನದೇವ, ಪಿ. ಪ್ರಕಾಶ್ ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net