ಈಡಿಗ ಇತರ ಪಂಗಡಗಳ ಜಾಗೃತ ಸಮಾವೇಶ 10ಕ್ಕೆ

IMG-20231206-WA0055.jpg
Published on

ದಾವಣಗೆರೆ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪನೆಯಾಗಿ 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಡಿ. 10ರಂದು ಬೆಳಗ್ಗೆ 11 ಗಂಟೆಗೆ ಅಮೃತ ಮಹೋತ್ಸವ ಹಾಗೂ ಈಡಿಗ ಸೇರಿ ಇತರ 25 ಪಂಗಡಗಳ ಜಾಗೃತ ಸಮಾವೇಶ ನಡೆಯಲಿದೆ.

ಈಡಿಗ ಸಮಾಜದ ಸಂಘಟನೆ ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ಸಮಾವೇಶ ನಡೆಸಲಾಗುತ್ತಿದೆ. ಸೇಂದಿ, ಸಾರಾಯಿ ಮಾರಾಟ ನಿಷೇಧಿಸಿದ್ದ ಸಂದರ್ಭದಲ್ಲಿ 28 ವರ್ಷದ ಹಿಂದೆ ಸಮಾವೇಶ ನಡೆಸಲಾಗಿತ್ತು. ಎರಡನೇ ಬಾರಿಗೆ ಆಯೋಜನೆ ಆಗುತ್ತಿದೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಎ.ನಾಗರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಘದ ರಾಜ್ಯಾಧ್ಯಕ್ಷ ಡಾ. ಎಂ. ತಿಮ್ಮೇಗೌಡ ಅಧ್ಯಕ್ಷತೆಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಎಲ್ಲ ರಾಜಕೀಯ ಪಕ್ಷದ ರಾಜಕೀಯ ಪ್ರಮುಖರು, ಜನಪ್ರತಿನಿಧಿಗಳು, ಚಿತ್ರನಟರು ಭಾಗವಹಿಸುವರು. ಸುಮಾರು 6 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು.

ಈಡಿಗರ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ 1 ಸಾವಿರ ಕೋಟಿ ರೂ. ಅನುದಾನ ಕಲ್ಪಿಸಬೇಕು. ಸೇಂದಿ, ಸಾರಾಯಿ ಮಾರಾಟ ನಿಷೇಧದಿಂದಾಗಿ ಅನೇಕರು ಕುಲಕಸುಬು ಬಿಟ್ಟು ಬೀದಿಬದಿ ವ್ಯಾಪಾರ ಮಾಡುವಂತಾಗಿದೆ. ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಉದ್ಯೋಗ, ಶೈಕ್ಷಣಿಕ ಪ್ರೋತ್ಸಾಹಧನ ನೀಡಬೇಕು ಎಂಬುದು ಸೇರಿ ಇತರೆ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಿಂದ 35, ಚಿತ್ರದುರ್ಗ ಜಿಲ್ಲೆಯಿಂದ 45 ಬಸ್‌ಗಳಲ್ಲಿ ಸಮಾಜದವರು ಸಮಾವೇಶಕ್ಕೆ ತೆರಳಲಿದ್ಧಾರೆ ಎಂದರು. ಪ್ರಣವಾನಂದ ಸ್ವಾಮೀಜಿ ಅವರು ಇತ್ತೀಚೆಗೆ ಸಮಾಜದ ಸಂಘಟನೆಗಾಗಿ ಹೋರಾಟ ಆರಂಭಿಸಿದ್ದಾರೆ. ಹೀಗಾಗಿ ಅವರು ಕೇಂದ್ರ ಸಂಘದ ಗಮನಕ್ಕೆ ಬಂದಿಲ್ಲ. ಹೀಗಾಗಿ ಆಹ್ವಾನಪತ್ರಿಕೆಯಲ್ಲಿ ಅವರ ಭಾವಚಿತ್ರ ಪ್ರಕಟಿಸಲಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಚ್.ಶಂಕರ್, ಉಪಾಧ್ಯಕ್ಷರಾದ ರವೀಂದ್ರಬಾಬು, ಶಾಂತರಾಜ್, ಖಜಾಂಚಿ ರಾಜೇಂದ್ರಪ್ಪ, ಕೃಷ್ಣಮೂರ್ತಿ, ಭರಮಪ್ಪ, ಗಂಗಾಧರ್, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net