ಈಜಲು ಹೋಗಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

SHIVU
Published on

ಹನೂರು: ತಾಲೂಕಿನ ದಂಟಳ್ಳಿ ಸಮೀಪದ ಅರಣ್ಯ ಪ್ರದೇಶದ ಅಂಚಿನಲ್ಲಿರುವ ದಬ್ಬದಗುಳಿ ಬಸವೇಶ್ವರ ದೇಗುಲಕ್ಕೆ ಪಾಲಕರೊಂದಿಗೆ ತೆರಳಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದ ಬಾಲಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ.

ತಾಲೂಕಿನ ವಡಕೆಹಳ್ಳ ಗ್ರಾಮದ ರಾಜೇಶ್ ಎಂಬುವರ ಪುತ್ರ ಕೌದಳ್ಳಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಶಿವು (13) ಮೃತ ದುರ್ದೈವಿ. ಈತ ಹೊಸ ವರ್ಷದ ಹಿನ್ನೆಲೆ ಪಾಲಕರೊಂದಿಗೆ ದೇಗುಲಕ್ಕೆ ತೆರಳಿದ್ದನು. ಈ ವೇಳೆ ಸಮೀಪದ ಕಾವೇರಿ ನದಿಯಲ್ಲಿ ಕುಟುಂಬಸ್ಥರೊಂದಿಗೆ ಸ್ನಾನ ಮಾಡುವ ವೇಳೆ ಶಿವು ಈಜಲು ಹೋಗಿ ಕಣ್ಮರೆಯಾಗಿದ್ದನು. ನದಿಯಲ್ಲಿ ಮುಳುಗಿರುವುದಾಗಿ ತಿಳಿದು ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದರು. ಆದರೆ ಎಲ್ಲೂ ಸಿಗದಿದ್ದ ಹಿನ್ನೆಲೆ ಗುರುವಾರ ಸ್ಥಳೀಯ ಈಜುಗಾರರಿಂದ ನದಿಯಲ್ಲಿ ಹುಡುಕಾಟ ನಡೆಸಿದರು. ಆದರೆ 2 ದಿನ ಕಳೆದರೂ ಪತ್ತೆಯಾಗಲಿಲ್ಲ. ಇದರಿಂದ ಬಾಲಕ ನದಿಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಶುಕ್ರವಾರ ಬೆಳಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರು ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಿದರು. ಈ ವೇಳೆ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಕೌದಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಗ್ರಾಮಕ್ಕೆ ತೆರಳಿ ಬಾಲಕನ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net