ಈಜಲು ತೆರಳಿದ್ದವ ನೀರಿನಲ್ಲಿ ಮುಳುಗಿ ಸಾವು

05 HANUR 4
Published on

ಹನೂರು: ತಾಲೂಕಿನ ಹೂಗ್ಯಂ ಸಮೀಪದ ಯರಂಬಾಡಿಯ ಮಿನ್ನತ್ತುಹಳ್ಳ ಜಲಾಶಯದಲ್ಲಿ ಮಂಗಳವಾರ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ತಮಿಳುನಾಡಿನ ಆರ್ಮುಗಂ (35) ಮೃತರು. ಇವರು 2 ದಿನಗಳ ಹಿಂದೆ ಹೂಗ್ಯಂ ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿದ್ದು, ಮಧ್ಯಾಹ್ನ ಮಿನ್ನತ್ತುಹಳ್ಳ ಜಲಾಶಯಕ್ಕೆ ತೆರಳಿ ಈಜಲು ನೀರಿಗೆ ಇಳಿದಿದ್ದರು. ಆದರೆ ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಸಂಜೆಯಾದರೂ ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ಜಲಾಶಯಕ್ಕೆ ತೆರಳಿದಾಗ ಮೃತದೇಹ ದೊರೆತಿದೆ.

ಈ ಬಗ್ಗೆ ಸಂಬಂಧಿಕರು ಮಾಹಿತಿ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದರು. ಬಳಿಕ ಮೃತರ ಸಂಬಂಧಿಕ ನಾಗರಾಜು ಎಂಬುವರು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದರು. ಠಾಣಾಧಿಕಾರಿ ಪ್ರಶಾಂತ್ ನಾಯಕ್, ಸಿಬ್ಬಂದಿ ಪೆರಿಯನಾಯಗಂ, ಗಣೇಶ್, ಅಶೋಕ್, ಲೋಕೇಶ್ ಹಾಗೂ ಮನೋಹರ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದರು.

ಪೊಲೀಸರು ಮೃತದೇಹವನ್ನು ಹೂಗ್ಯಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net