

ಬೆಟ್ಟದಪುರ: ಬೆಟ್ಟದಪುರ ಸಮೀಪದ ಈಚೂರು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಸೋಮವಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ನೂತನ ದೇಗುಲವನ್ನು ಮಾಜಿ ಶಾಸಕ ಕೆ.ಮಹದೇವ್ ಈಚೂರು ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ಒಗ್ಗೂಡಿ ನೂತನ ದೇವಸ್ಥಾನವನ್ನು ನಿರ್ಮಿಸುವ ಮೂಲಕ ಗ್ರಾಮದ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ. ದೇವರು ಮತ್ತಷ್ಟು ಸುಖ, ಶಾಂತಿ, ನೆಮ್ಮದಿ ನೀಡುವ ಮೂಲಕ ಎಲ್ಲರ ಆರೋಗ್ಯವನ್ನು ಕಾಪಾಡಲಿ. ಮುಂದಿನ ದಿನಗಳಲ್ಲೂ ಎಲ್ಲರೂ ಒಗ್ಗಟ್ಟಿನಿಂದ ಜೀವನ ನಡೆಸಿ ಎಂದರು.
ದೇವಸ್ಥಾನ ಉದ್ಘಾಟನೆ ಹಿನ್ನೆಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟಗಳು ಹಾಗೂ ಹಸಿರು ತಳಿರು ತೋರಣಗಳು ರಾರಾಜಿಸುತ್ತಿದ್ದವು. ದೇವಸ್ಥಾನ ಸೇರಿದಂತೆ ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಮುಖಂಡರಾದ ಶ್ರೀನಿವಾಸ್, ಸ್ವಾಮಿಗೌಡ, ರಮೇಶ್, ದೊಡ್ಡೇಗೌಡ, ಸುರೇಶ್ ಇದ್ದರು.