ಈಚನೂರು ಕೆರೆಯಲ್ಲಿ ಮೊಣಕಾಲುದ್ದ ನೀರು

2
Published on

ಮೂರ್ತಿ ಟಿ.ಸಿ.ಎಸ್​.ತಿಪಟೂರು

ನಗರಕ್ಕೆ ಕುಡಿಯುವ ನೀರೊದಗಿಸುವ ಈಚನೂರು ಕೆರೆಯಲ್ಲಿ ಮೊಣಕಾಲುದ್ದ ನೀರಿದ್ದು, ನಗರಸಭೆ ಲಭ್ಯವಿರುವ ನೀರು ಬಳಸಿಕೊಳ್ಳಲು ಹರಸಾಹಸಪಡುತ್ತಿದೆ.

ನಗರದಿಂದ 6ಕಿ.ಮೀ.ದೂರದಲ್ಲಿರುವ ಈಚನೂರು ಕೆರೆಗೆ ಟಿ.ಸುಬ್ರಮಣ್ಯಂ ನಾಲಾ ಸಂಖ್ಯೆ 3ರಲ್ಲಿ ಹೇಮಾವತಿ ನೀರು ಹರಿಯುವ ಸಮಯದಲ್ಲಿ ಮೋಟಾರ್​ ಮೂಲಕ ಕೆರೆಗೆ ನೀರು ತುಂಬಿಸಿಕೊಂಡು ನಂತರ ಅಲ್ಲಿಂದ ನಗರದ ನೀರು ಶುದ್ಧೀಕರಣ ಟಕಕ್ಕೆ ಪಂಪ್​ ಮಾಡಿ ಓವರ್​ಹೆಡ್​ ಟ್ಯಾಂಕ್​ ಮೂಲಕ ನಗರದ ಜನತೆಗೆ ನೀರೊದಗಿಸುವ ಜವಾಬ್ದಾರಿ ನಗರಸಭೆಯದ್ದಾಗಿದೆ. ಇದಕ್ಕಾಗಿ ಪ್ರತಿ ವರ್ಷ ಮುಂಗಾರಿನ ಸಮಯದಲ್ಲಿ ಹಾಸನದ ಗೊರೂರು ಜಲಾಶಯದಿಂದ ನಾಲೆ ಮೂಲಕ ಹರಿಸುವ ನೀರನ್ನು ಅವಲಂಬಿಸಲಾಗಿದೆ.

ಕಳೆದ ವರ್ಷ ಕೋಡಿ ಹರಿದಿದ್ದ ಈಚನೂರು ಕೆರೆಯಲ್ಲಿ ಪ್ರಸ್ತುತ ಮೊಣಕಾಲುದ್ದದಷ್ಟು ನೀರಿದ್ದು, ನಗರಕ್ಕೆ ನೀರು ಪಂಪ್​ ಮಾಡುವ ಜಾಕ್​ವೆಲ್​ಗೆ ಸಲೀಸಾಗಿ ನೀರು ಎಟಕುತ್ತಿಲ್ಲ. ಇನ್ನು ಗೊರೂರು ಜಲಾಶಯದಿಂದ ನಾಲೆಗೆ ನೀರು ಹರಿಸುವುದು ವಾಡಿಕೆಯಂತೆ (ಕಳೆದ ವರ್ಷ ಜೂನ್​&ಜುಲೈ ನಲ್ಲೆ ನೀರು ಬಿಡಲಾಗಿತ್ತು) ಆಗಸ್ಟ್​ ತಿಂಗಳಲ್ಲಿ. ಅಲ್ಲಿವರೆಗೂ ಲಭ್ಯವಿರುವ ನೀರನ್ನು ಮಿತವಾಗಿ ಬಳಸಿಕೊಳ್ಳಲು ಮುಂದಾಗಿರುವ ನಗರಸಭೆ, ಕೆರೆ ಮಧ್ಯೆ ಕಾಲುವೆ ಮಾಡಿ, ಜಾಕ್​ ವೆಲ್​ ತಲುಪುವಂತೆ ಪರ್ಯಾಯ ವ್ಯವಸ್ಥೆ ಕಂಡುಕೊಂಡಿದೆ.

ತಿಳಿಯಾಗದ ಬಗ್ಗಡ: ಕೃತಕ ಕಾಲುವೆಯಲ್ಲಿ ಹರಿಯುವ ನೀರು ಗಡಸು/ಬಗ್ಗಡಯುಕ್ತವಾಗಿರುವ ಕಾರಣ ಒಂದೆರೆಡು ದಿನ ತಿಳಿಯಾಗಲು ಬಿಟ್ಟು, ನಂತರ ನಗರಕ್ಕೆ ಪಂಪ್​ ಮಾಡಲಾಗುತ್ತಿದ್ದು, ವೇಳಾಪಟ್ಟಿಯಂತೆ ನಗರದ ಜನತೆಗೆ ನೀರು ಪೂರೈಸಲು ವಿಳಂಭವಾಗುತ್ತಿದೆ. ಈ ಕಾರಣದಿಂದ ಕಳೆದ 7 ವರ್ಷಗಳಿಂದಲೂ ಕುಂಟುತ್ತಾ ಸಾಗಿರುವ 24/7 ಕುಡಿಯುವ ನೀರಿನ ಯೋಜನೆ ಈಗಲೂ ಅರ್ಥ ಕಳೆದುಕೊಂಡಿದೆ.

ಪ್ರಸ್ತುತ 260 ಎಕರೆ ವಿಸ್ತೀರ್ಣ ಹಾಗೂ 72ಎಂ.ಸಿ.ಎಫ್​.ಟಿ. ನೀರು ಸಾಮರ್ಥ್ಯದ ಈಚನೂರು ಕೆರೆಯಿಂದ ವರ್ಷವಿಡೀ ನಗರದ ಜನತೆಗೆ ನೀರೊದಗಿಸುವುದು ಕಷ್ಟ ಎಂದರಿತ ಸಚಿವ ಬಿ.ಸಿ.ನಾಗೇಶ್​, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೆರೆಯ ಹೂಳೆತ್ತಿ. ಕ್ಲೇ ಲೈನ್​ ಮತ್ತು ಅಗತ್ಯವಿರುವೆಡೆ ರಬ್ಬರ್​ ಮ್ಯಾಟ್​ ಅಳವಡಿಸುವುದು ಮತ್ತು ಕೆರೆಯನ್ನು 5 ಅಡಿಗಳಷ್ಟು ಆಳ ಮಾಡುವ ಮೂಲಕ ಕೆರೆ ನೀರನ್ನು 100 ಎಂ.ಸಿ.ಎಫ್​.ಟಿ. ಸಾಮರ್ಥ್ಯಕ್ಕೆ ಹೆಚ್ಚಿಸುವ 26 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಿ, 2021ರ ಜೂನ್​ 15 ರಂದು ಕಾಮಗಾರಿಗೆ ಚಾಲನೆ ನೀಡಿದರು.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಈಚನೂರು ಕೆರೆ ಹೂಳೆತ್ತುವ ಕೆಲಸ ಮುಗಿದು, ಪ್ರಸಕ್ತ ವರ್ಷದಿಂದ ಹೆಚ್ಚುವರಿ ನೀರು ಶೇಖರಣೆಯಾಗಬೇಕಿತ್ತು. ಆದರೆ ಪ್ರಾರಂಭದಲ್ಲೇ ಕೆರೆ ಹೂಳು ಮಣ್ಣಿನ ವಿಚಾರವಾಗಿ ರೈತರ ಸಂರ್ಷ, ನಂತರ ಮಳೆ, ಇತ್ಯಾದಿ ಕಾರಣಗಳಿಂದ ಪ್ರಾರಂಭದಿಂದಲೂ ಕಾಮಗಾರಿ ವೇಗ ಕಳೆದುಕೊಂಡಿತ್ತು. ಸದ್ಯ ಶೇ.30 ಹೂಳೆತ್ತುವ ಕೆಲಸ ಮುಗಿದಿದೆ. ಅಧಿಕಾರಿಗಳು ಕಾಮಗಾರಿಗೆ 6 ತಿಂಗಳ ಗಡುವು ನೀಡಲಾಗಿತ್ತು ಎಂದರೆ, ಗುತ್ತಿಗೆದಾರರ ಕಡೆಯವರು ಕಾಮಗಾರಿ ಮುಗಿಸಲು 2023ರ ಜ.23ರವರೆಗೆ ಸಮಯಾವಕಾಶವಿದೆ ಎನ್ನುತ್ತಾರೆ.

ಮಳೆಯ ಕಾರಣ ಈಚನೂರು ಕೆರೆಯ ಹೂಳೆತ್ತುವ ಕಾಮಗಾರಿ ನಿರೀತ ಸಮಯದಲ್ಲಿ ಆಗುತ್ತಿಲ್ಲ. ಲಭ್ಯವಿರುವ ನೀರನ್ನು ಶುದ್ಧೀಕರಿಸಿ ಜನತೆಗೆ ಪೂರೈಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. > ಪಿ.ಜೆ.ರಾಮಮೋಹನ್​ ನಗರಸಭೆ ಅಧ್ಯಕ್ಷ ಮಳೆ ಸಾಧ್ಯತೆ, ಪ್ರಕೃತಿ ವಿಕೋಪ, ಮಣ್ಣಿನ ಗುಣಮಟ್ಟ, ಕಾಮಗಾರಿ ಮುಗಿಸಲು ತೆಗೆದುಕೊಳ್ಳುವ ಸಮಯ ಎಲ್ಲವನ್ನೂ ಅಂದಾಜಿಸಿಯೇ ಕರಾರು ಮಾಡಿಕೊಳ್ಳಲಾಗಿರುತ್ತೆ. ಆದರೆ ಇಲ್ಲಿವರೆಗೂ ಬಹುತೇಕ ಕಾಮಗಾರಿ ಅಂದುಕೊಂಡ ಸಮಯದಲ್ಲಿ ಮುಗಿದಿರುವುದು ಬಹಳ ವಿರಳ. > ಜಗದೀಶ್​, ಕೆ.ಆರ್​.ಬಡಾವಣೆ ನಿವಾಸಿ ತಿಪಟೂರು ಪ್ರತಿ ವರ್ಷದಂತೆ ನಾಲೆಯಲ್ಲಿ ನೀರು ಹರಿದ ತಕ್ಷಣ ಕೆರೆಗೆ ಹರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಲೆಯಲ್ಲಿ ಹರಿಯುವ ನೀರಿನ ಸದುಪಯೋಗ ಪಡೆದುಕೊಂಡು ಜನತೆಗೆ ನೀರು ಪೂರೈಸಲಾಗುವುದು. > ಉಮಾಕಾಂತ್​, ಆಯುಕ್ತ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net