

ಮುಳಬಾಗಿಲು: ಅಪರಾಧ ಪ್ರಕರಣಗಳ ವ್ಯಕ್ತಿಗಳೇ ರಾಜಕಾರಣಿಗಳಾಗಿ ಆಳ್ವಿಕೆ ನಡೆಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದನ್ನು ತಡೆಯಲು ರೈತರು ರಾಜಕಾರಣಕ್ಕೆ ಪ್ರವೇಶ ಮಾಡಲಾಗಿದೆ ಎಂದು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಅಂಚೆ ಕಚೇರಿ ಮುಂಭಾಗದ ರಸ್ತೆಯಲ್ಲಿ ಗುರುವಾರ ರೈತ ರಾಜಕೀಯ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಇಂದು ದೇಶ ಮತ್ತು ರಾಜ್ಯಗಳಲ್ಲಿ ಆಳ್ವಿಕೆ ಮಾಡುತ್ತಿರುವ ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಿಂದಲೇ ಅಧಿಕಾರ ನಡೆಸುತ್ತಿವೆ. ವಿರೋದ ಪಕ್ಷ ಇದರಲ್ಲಿ ಪಾಲುದಾರರಾಗಿ ಸಾಂಕೇತಿಕವಾಗಿ ಮಾತ್ರ ಪ್ರತಿಭಟಿಸುತ್ತಿವೆ ಎಂದರು.
ರೈತನಾಯಕರು ಎಂದು ಹೇಳಿಕೊಳ್ಳುವ ಎಚ್.ಡಿ.ದೇವೇಗೌಡರು ಕಾಶಿಗೆ ತೆರಳಿ ಗಂಗಾಸ್ನಾನ ಮಾಡಿ ದೆಹಲಿಗೆ ತೆರಳಿ ಪ್ರಧಾನಿ ಮೋದಿಯೊಂದಿಗೆ ಏನು ಮಾತುಕತೆ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರಾಜ್ಯದ ರೈತರ ಪರ ಒಂದೇ ಒಂದು ವಿಷಯ ಮಾತನಾಡಿಲ್ಲ. ರೈತರಿಗೆ ಅನುಕೂಲ ಮಾಡಿಕೊಡುವುದು ಬಿಟ್ಟು ಅವರೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
ನೀತಿ ರಾಜಕಾರಣ ಮಾಯವಾಗಿದ್ದು ಕುಟುಂಬ ರಾಜಕಾರಣ ಬೆಳೆಯುತ್ತಿದೆ. ಇವೆಲ್ಲವನ್ನು ಮನಗೊಂಡು ರೈತರ ಉಳಿವಿಗಾಗಿ ರಾಜಕೀಯ ಪ್ರವೇಶ ಮಾಡಬೇಕಾಗಿದ್ದು, ರೈತ ಸಂಘ ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲೂ ರೈತ ರಾಜಕೀಯ ಸಮಾವೇಶ ಹಮ್ಮಿಕೊಂಡಿದೆ. ತಾಲೂಕು ಘಟಕಗಳು ಪ್ರತಿ ಬೂತ್‌ಮಟ್ಟದಲ್ಲಿ 10 ಸ್ವಯಂ ಸೇವಕರನ್ನು ಗುರುತಿಸಿ ಜಾಗೃತಿ ಮೂಡಿಸಿ ನೀತಿವಂತರನ್ನು ರಾಜಕಾರಣಕ್ಕೆ ಬರುವಂತೆ ಪ್ರೇರೇಪಿಸಬೇಕು ಎಂದರು.
ಕಾರ್ಯದರ್ಶಿ ದಳಸನೂರು ವೀರಭದ್ರಸ್ವಾಮಿ ಮಾತನಾಡಿ, ಮುಳಬಾಗಿಲು ತಾಲೂಕು ಕಚೇರಿ ದಲ್ಲಾಳಿಗಳ ಕೈಯಲ್ಲಿದೆ. ಇಲ್ಲಿನ ಶಾಸಕ ಎಚ್.ನಾಗೇಶ್‌ಗೆ ದೂರು ನೀಡಿದರೂ ಕಿವಿಗೆ ಹಾಕಿಕೊಳ್ಳದೆ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಹಸಿರು ಟವಲ್‌ಗಳ ಬಗ್ಗೆ ಸಂಸದ ಎಸ್.ಮುನಿಸ್ವಾಮಿ ಆರೋಪ ಮಾಡಿರುವುದು ಸರಿಯಲ್ಲ. ಮಾಡಿರುವ ಆರೋಪದ ಅವರ ದಬ್ಬಾಳಿಕೆ, ದೌರ್ಜನ್ಯಗಳ ಬಗ್ಗೆ ರೈತ ಸಂಘ ಹೋರಾಟ ಹಮ್ಮಿಕೊಳ್ಳಲಿದೆ. ಅವರು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರತಿಭಟಿಸುತ್ತೇವೆ ಎಂದರು.
ಉಪಾಧ್ಯಕ್ಷ ಕೆಂಚೇಗೌಡ, ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ, ತಾಲೂಕು ಅಧ್ಯಕ್ಷ ಪೆತ್ತಾಂಡ್ಲಹಳ್ಳಿ ಪಿ.ಎಸ್.ಗಂಗಾಧರ್, ಕಾರ್ಯಾಧ್ಯಕ್ಷ ಅಬ್ಬಣಿ ಶ್ರೀನಿವಾಸ್, ಪದಾಧಿಕಾರಿಗಳಾದ ಮೀಸೆಕೃಷ್ಣಪ್ಪ, ಬಿ.ಎಂ.ಶ್ರೀನಿವಾಸ್, ರಮೇಶ್, ಎಂ.ಆರ್.ರಾಂಬಾಬು, ಬೈರೇಗೌಡ ಇತರರಿದ್ದರು.