

ಚನ್ನರಾಯಪಟ್ಟಣ: ಮಕ್ಕಳಲ್ಲಿನ ಆಸಕ್ತಿ, ಪ್ರತಿಭೆ ಗೊತ್ತಾಗುವುದೇ ಶಿಬಿರಗಳಲ್ಲಿ. ಆ ಕುರಿತಾಗಿ ಅವರಿಗೆ ಮತ್ತಷ್ಟು ತರಬೇತಿ ನೀಡಿದರೆ ಅವರು ದೇಶದ ಆಸ್ತಿಗಳಾಗಿ ನಿರ್ಮಾಣವಾಗುತ್ತಾರೆ ಎಂದು ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಮಂಗಳವಾರ ನಡೆದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸ್ಮರಣಾರ್ಥ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಲಿನಿ ಅಂತಾರಾಷ್ಟ್ರೀಯ ಶಾಲೆ ಹಾಗೂ ಬಾಲವಿಕಾಸ ಅಕಾಡೆಮಿ ಧಾರವಾಡ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆ ರಜೆ ಶುರುವಾದರೆ ಸಾಕು ಹಲವು ವರ್ಷಗಳ ಹಿಂದೆ ಹಳ್ಳಿಗಳಲ್ಲಿದ್ದ ಅಜ್ಜಿಯ ಮನೆ ನೆನಪಾಗುತ್ತಿತ್ತು. ತಿಂಗಳುಗಟ್ಟಲೇ ಅಲ್ಲಿನ ಸುಂದರವಾದ ವಾತಾವರಣ ಕಣ್ತುಂಬಿಕೊಂಡು ತಮ್ಮ ವಾರಿಗೆಯವರೊಂದಿಗೆ ಆಟವಾಡಿದರೆ ಮಕ್ಕಳಿಗೆ ಬೇಸಿಗೆ ಮುಗಿದಿದ್ದೇ ಗೊತ್ತಾಗುತ್ತಿರಲಿಲ್ಲ. ವರ್ಷಗಳು ಉರುಳಿದಂತೆಲ್ಲಾ ನಗರ ಪ್ರದೇಶಗಳ ಮಕ್ಕಳಿಗೆ ಈಗ ಬೇಸಿಗೆ ಶಿಬಿರಗಳೇ ಅಜ್ಜಿ ಮನೆಗಳಾಗಿವೆ ಎಂದರು.
ಮಕ್ಕಳು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯವಂತರಾಗಿರುತ್ತಾರೆ. ಬೇಸಿಗೆಯಲ್ಲಿ ಶಾಲೆಗೆ ರಜೆ ಇರುವುದರಿಂದ ಮಕ್ಕಳಿಗೆ ಯಾವುದಾದರೂ ತರಬೇತಿ ಅಗತ್ಯವಾಗಿ ಬೇಕು. ಅವರ ಆಸಕ್ತಿ ಗುರುತಿಸಬೇಕು. ಒಂದು ತಂಡವಾಗಿ ಎಲ್ಲರೊಂದಿಗೆ ಬೆರೆಯುವ, ಮಾತನಾಡುವ ಗುಣ ಶಿಬಿರಗಳಿಂದ ರೂಢಿಯಾಗುತ್ತದೆ. ಶಿಬಿರಗಳು ಶಿಸ್ತು ಕಲಿಸಿ, ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುತ್ತವೆ ಎಂದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಮಾತನಾಡಿ, ಇಂದಿನ ಟಿವಿ ಮಾಧ್ಯಮ, ಮೊಬೈಲ್‌ಗಳ ಅತಿಯಾದ ಬಳಕೆಯಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಉನ್ನತ ಭಾವನೆಗಳು, ಮೌಲ್ಯಗಳು ನಶಿಸಿಹೋಗುತ್ತಿವೆ. ಮಕ್ಕಳನ್ನು ಟಿವಿ, ಮೊಬೈಲ್‌ನ ವ್ಯಾಮೋಹದಿಂದ ಹೊರತಂದು, ಮನೆಯಿಂದ ಹೊರಗೆ ಗೆಳೆಯರೊಂದಿಗೆ ಸ್ವಚ್ಛಂದವಾಗಿ ತಮ್ಮ ಬಾಲ್ಯವನ್ನು ಕಳೆಯಲು ಅವಕಾಶ ನೀಡಬೇಕೆಂದರು.
5ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳ ಬೇಸಿಗೆ ಶಿಬಿರವು ಏ. 18ರಿಂದ ಆರಂಭವಾಗಿ 21 ರವರೆಗ ನಾಲ್ಕು ದಿನಗಳು ನಡೆಯಲಿದೆ. ಶಿಬಿರದಲ್ಲಿ ಕಥೆ, ಕಾವ್ಯ, ನಾಟಕ, ದೇಸಿ ಆಟಗಳು, ರಂಗಗೀತೆಗಳು, ಜಾನಪದ ಗೀತೆ, ಕಂಸಾಳೆ, ಚಿತ್ರಕಲೆ, ನೃತ್ಯ, ಯೋಗ, ಪ್ರಾಣಾಯಾಮ, ಪ್ರವಾಸ, ಮುಂತಾದ ಸೃಜನಾತ್ಮಕ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತದೆ ಎಂದರು.
ಗಾಂಧಿ ಪ್ರತಿಷ್ಠಾನದ ಉಪಾಧ್ಯಕ್ಷ ಶಿವರಾಜ್, ಸಂಪನ್ಮೂಲ ವ್ಯಕ್ತಿಗಳಾದ ಗಿರಿರಾಜ್, ಪ್ರಭಾಕರ್, ಮಹದೇವ್, ಸುಶೀಲಾ ರಾಮು, ತಾರಾ ಮಹೇಶ್, ಸೋಮಶೇಖರ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ನಾಗೇಶ್ ಎ.ಎಲ್. ಜಯರಾಂ, ಲನಾಗುಪ್ತ ಇತರರಿದ್ದರು.