

ಹಾಸನ: ಎಚ್.ಡಿ. ದೇವೇಗೌಡರು ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದು ಶಾಸಕ ಎಚ್.ಡಿ. ರೇವಣ್ಣ ಕಿಡಿಕಾರಿದರು.
ಬೇಲೂರು ಮತ್ತು ಹಾಸನದಲ್ಲಿ ಮಂಗಳವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಾಸನ ಜಿಲ್ಲೆಗೆ ಅಪ್ಪ-ಮಕ್ಕಳ ಕೊಡುಗೆ ಶೂನ್ಯ ಎಂಬುದಾಗಿ ಟೀಕೆ ಮಾಡಿದ್ದಕ್ಕೆ ಪ್ರತಿಯಾಗಿ ಎಚ್.ಡಿ. ಗುರುವಾರ ನಗರದ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದರು.
ಹಾಸನ-ಬೆಂಗಳೂರು ರೈಲ್ವೆ ಮಾರ್ಗ ಮಾಡಿದ್ದು ಯಾರು, ಹಾಸನ-ಆಲೂರು-ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗ ಯೋಜನೆ ಪ್ರಸ್ತಾಪ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಈಗಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಎಚ್.ಡಿ. ದೇವೇಗೌಡರ ಸಂಬಂಧ ಹೇಗಿದೆ, ಹಿಂದೆ ವಾಜಪೇಯಿ ಅವರು ಪ್ರಧಾನಿ ಆಗಿದಾಗ ಅವರೊಂದಿಗಿನ ಸಂಬಂಧ ಹೇಗಿತ್ತು ಎಂಬುದನ್ನು ತಿಳಿದುಕೊಂಡು ನಡ್ಡಾ ಅವರು ಹಾಸನಕ್ಕೆ ಬಂದಿದ್ದರೆ ಚೆನ್ನಾಗಿತ್ತು. ಹಾಸನ-ಬೇಲೂರು- ಬಿಳಿಕೆರೆ ನಡುವಿನ ರಾಷ್ಟ್ರೀಯ ಹೆದ್ದಾರಿ 373ಕ್ಕೆ ಅಡಿಗಲ್ಲು ಹಾಕಿದ್ದು ದೇವೇಗೌಡರು. ಯೋಜನೆ ಮೊಟಕುಗೊಳಿಸಿ ಬೇರೆ ಬೇರೆ ಕಡೆಗೆ ತೆಗೆದುಕೊಂಡು ಹೋದಾಗ ಇದೇ ಬಿಜೆಪಿಯವರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
ಹಾಸನ-ಬೇಲೂರು ರಸ್ತೆ ನಾಲ್ಕು ಪಥ ಆಗಲು ಟೆಂಡರ್ ಕರೆಯೋ ಹಂತದಲ್ಲಿದೆ. ಅದನ್ನು ಫಾಲೋ ಅಪ್ ಮಾಡುತ್ತೇವೆ. ಇದಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಹಕಾರ ನೀಡಿದ್ದಾರೆ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಹಾಸನ-ಬಿ.ಸಿ. ರೋಡ್ ರಸ್ತೆ ಮಾಡಲು ಅನುಮೋದನೆ ನೀಡಿದ್ದೆ. ಆದರೆ ಈವರೆಗೂ ಕಾಮಗಾರಿ ಮುಗಿದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿರುವುದರಿಂದ ಈ ಕಾಮಗಾರಿ ಕುರಿತು ನಿರ್ಲಕ್ಷೃ ವಹಿಸಿರಬೇಕು ಎಂದು ವ್ಯಂಗ್ಯವಾಡಿದರು.
ಹಿಂದೆ ಜಿಲ್ಲೆಗೆ ಕೊಡುಗೆ ನೀಡಿದರೆ ಇದು ಹಾಸನ ಬಜೆಟ್, ಮಂಡ್ಯ ಬಜೆಟ್, ರಾಮನಗರ ಬಜೆಟ್ ಎನ್ನುತ್ತಿದ್ದರು. ಕಳೆದ 10 ವರ್ಷಗಳಿಂದ ಈ ಗಿರಾಕಿಗಳು ಜಿಲ್ಲೆಗೆ ಏನು ನೀಡಿದರು. ಹಾಸನ ವಿಮಾನ ನಿಲ್ದಾಣ ವಿಚಾರದಲ್ಲಿ ಏನೆಲ್ಲಾ ವ್ಯಾಪಾರ ನಡೆದಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುವೆ ಎಂದರು.
ಏನನ್ನೂ ಮಾಡದವರಿಗೆ ನಮ್ಮ ಕುಟುಂಬ ಜಪ ಮಾಡದೇ ಇದ್ದರೆ ಆಗೋದಿಲ್ಲ. ದಾಖಲೆ ಸಮೇತ ಬಂದು ಮಾತಾಡಲಿ. ಆಗ ನಮ್ಮ ಕೊಡುಗೆ ಏನು ಎಂದು ಹೇಳುವೆ. ದೇವೇಗೌಡರು ಬದುಕಿರುವಾಗಲೇ, ಜಿಲ್ಲೆಗೆ ಏನು ಮಾಡಬೇಕೋ ಅದನ್ನು ಮಾಡಿಯೇ ತೀರುವೆ ಎಂದು ಸವಾಲು ಹಾಕಿದರು.