

ಹಾಸನ: ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಹೆಣ್ಣನ್ನು ಹುಟ್ಟಿನಿಂದಲೇ ನಿರಾಕರಿಸುವ ಈ ಸಮಾಜ ಮಹಿಳೆಗೆ ಯಾವ ರೀತಿಯಲ್ಲಿಯೂ ಸಮಾನವಾದ ಅವಕಾಶಗಳನ್ನು, ಸ್ಥಾನಮಾನಗಳನ್ನು ಕೊಟ್ಟಿಲ್ಲ. ಮಹಿಳೆಯನ್ನು ಕೇವಲ ಸರಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಹಿತಿ ರೂಪಾ ಹಾಸನ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಮಹಿಳಾ ವೇದಿಕೆ ಮತ್ತು ಸಿಐಟಿಯು, ಕೆಪಿಆರ್‌ಎಸ್, ಎಸ್‌ಎಫ್‌ಐ, ಡಿವೈಎಫ್‌ಐ, ಡಿಎಚ್‌ಎಸ್, ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ ಲಿಂಗ ಅಸಮಾನತೆ, ಮಹಿಳೆಯರ ಘನತೆ ಮತ್ತು ಅಭಿವೃದ್ಧಿಗಿರುವ ಸಂಬಂಧ ವಿಷಯದ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದ್ದು, ಇದರಿಂದ ಶೇ.30 ರಷ್ಟು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದರು.
ಮಹಿಳೆಯರ ಸುರಕ್ಷತೆಯ ಪ್ರಶ್ನೆ ಇಂದಿನ ಪೋಷಕರಿಗೆ ದೊಡ್ಡ ಸವಾಲಾಗಿದ್ದು ಸಮಾಜದಲ್ಲಿ ಹೆಣ್ಣುಮಕ್ಕಳು ಘನತೆಯಿಂದ ಬದುಕುವ ವಾತಾವರಣವನ್ನು ಹಾಳು ಮಾಡಲಾಗಿದೆ. ಮಹಿಳೆಯರ ಮೇಲೆ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಗಿಕ ಕಿರುಕುಳ, ದೌರ್ಜನ್ಯ ಅತ್ಯಾಚಾರದಂತಹ ಪ್ರಕರಣಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇವುಗಳ ವಿರುದ್ಧ ಹೆಣ್ಣು ಮಕ್ಕಳು ಜಾಗೃತರಾಗಿ ಸಂಘಟಿತ ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದರು.
ಒಂದೆಡೆ ಹೆಣ್ಣು ಮಕ್ಕಳ ಕಳ್ಳ ಸಾಗಾಣೆ ಮಾಡಿ ಅವರನ್ನು ವೇಶ್ಯಾವಾಟಿಕೆಯಂತಹ ದಂಧೆಗಳಿಗೆ ತಳ್ಳುತ್ತಿರುವ ದೊಡ್ಡ ಜಾಲ ಭಾರತದಲ್ಲಿ ಮತ್ತು ರಾಜ್ಯದಲ್ಲಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಬಾಲ್ಯವಿವಾಹಗಳು ಹೆಚ್ಚಾಗಿ ಬಾಲ ತಾಯಂದಿರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಸನದ ಅಂಕಿ- ಅಂಶಗಳನ್ನು ಗಮನಿಸಿದರೆ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಆತ್ಯಹತ್ಯೆ, ಬಾಲ್ಯವಿವಾಹ, ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆತಂಕವನ್ನು ಸೃಷ್ಟಿಸಿದೆ. ಸಂವಿಧಾನ ಶಿಲ್ಪ ಬಿ.ಆರ್. ಅಂಬೇಡ್ಕರ್ ಅವರ ಮಹಿಳೆಯರ ಪ್ರಗತಿಯ ಮಟ್ಟದಿಂದ ಸಮಾಜದ ಪ್ರಗತಿಯ ಮಟ್ಟವನ್ನು ಅಳೆಯುತ್ತೇನೆ ಎಂಬ ಮಾತಿನಂತೆ ಮಹಿಳೆಯರನ್ನು ಸಮಾನವಾಗಿ ಕಾಣುವ, ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ಮತ್ತು ಅವರನ್ನೂ ಅಭಿವೃದ್ಧಿಯ ಪಥದಲ್ಲಿ ಒಳಗೊಂಡಾಗ ಮಾತ್ರ ನೈಜ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪಾ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರನ್ನು ಕಡೆಗಣಿಸಲಾಗಿದೆ. ದುಡಿಯುವ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ವೇತನದಲ್ಲಿ ತಾರತಮ್ಯ ನೀತಿ ಜಾರಿಯಲ್ಲಿದೆ. ಹಲವು ಹೋರಾಟಗಳ ನಂತರ ಮಹಿಳೆಯರಿಗೆ ಸಮಾನ ಮತದಾನದ ಹಕ್ಕು ಸಿಕ್ಕಿದ್ದರೂ ರಾಜಕೀಯದಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನಗಳು ಇದುವರೆಗೂ ಲಭಿಸಿಲ್ಲ. ಶೇಖಡ 50 ರಷ್ಟಿರುವ ಮಹಿಳೆಯರಿಗೆ ರಾಜಕೀಯದಲ್ಲಿ ಶೇಖಡ 33 ರಷ್ಟು ಮೀಸಲಾತಿಯನ್ನು ಒದಗಿಸುವ ಕುರಿತು ಇನ್ನೂ ಚರ್ಚಿಸುತ್ತಿದ್ದೇವೆ. ಸಿಕ್ಕ ಅವಕಾಶಗಳನ್ನು ಮಹಿಳೆಯರೆ ಸಂಪೂರ್ಣವಾಗಿ ಚಲಾಯಿಸುವ ಮುಕ್ತ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಪುರುಷ ಪ್ರಧಾನ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ಕವಿತಾ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕರಾದ ಡಾ. ಶ್ರೀದೇವಿ, ಡಾ.ಪೂರ್ಣಿಮಾ ಉಪಸ್ಥಿತರಿದ್ದರು.