

ಹಾವೇರಿ: ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಬಾವಿ ತಯಾರಿ ಈಗಾಗಲೇ ನಡೆದಿದೆ. ಈ ಬಾರಿ ಹಾವೇರಿಯಲ್ಲಿ ನವೆಂಬರ್ ನಲ್ಲೇ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಮ್ಮೇಳನ ತಯಾರಿಗೆ ಸಮಯ ಕಡಿಮೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದರು.
ಬಜೆಟ್ ನಲ್ಲಿ ಘೋಷಿಸಿದಂತರ ಜಿಲ್ಲೆಯಲ್ಲಿ ಇಂದು ಮೆಗಾ ಡೇರಿ ಹಾಗೂ ಕೆಎಂಎಫ್ ಕಚೇರಿ ಉದ್ಘಾಟಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.
ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ಹೇಳಿರುವಂತೆ ಇಂಡಸ್ಟ್ರಿಯಲ್ ಪಾಕ್೯, ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಕಾರ್ಯಗತವಾಗಿದ್ದೇವೆ.
ಪಿಎಫ್ ಐ ಈಗಾಗಲೇ ಬ್ಯಾನ್ ಆಗಿದೆ. ಇದು ಹಲವು ರೂಪಾಂತರ ಪಡೆದುಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಮೊದಲು ಸಿಮಿ ಇತ್ತು, ಸಿಮಿಯಿಂದ ಕೆಎಫ್ ಡಿ ಆಯ್ತು. ನಂತರ ಪಿಎಫ್ ಐ ಆಯ್ತು. ಎಸ್ ಡಿಪಿಐ ಚುನಾವಣಾ ಆಯೋಗದಿಂದ ನೋಂದಣಿಯಾಗಿರುವ ರಾಜಕೀಯ ಪಕ್ಷ. ಅದರ ಬಗ್ಗೆ ಬೇರೆ ರೀತಿಯ ಕಾನೂನುಗಳಿವೆ. ಅದರ ಕುರಿತು ಕೇಂದ್ರ ಸರ್ಕಾರ ಅದರದ್ದೇ ಆದ ಕ್ರಮ ಜರುಗಿಸಲಿದೆ ಎಂದರು.
ಗುಂಡ್ಲುಪೇಟೆಯಲ್ಲಿ ಜೋಡೋ ಯಾತ್ರೆ ಫ್ಲೆಕ್ಸ್ ಹರಿದು ಹಾಕಿದ್ದಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಡಿಕೆಶಿ ಇರಲಿ ಯಾರೇ ಇರಲಿ ಫ್ಲೆಕ್ಸ್ ಹಾಕಬೇಕಾದರೂ ಅದಕ್ಕೆ ಅನುಮತಿ ಪಡೆಯಬೇಕು.
ಯಾವುದೇ ರಾಜಕೀಯ ಪಕ್ಷದ ಫ್ಲೆಕ್ಸ್ ಹರಿಯುವುದು ಅಗತ್ಯವಿಲ್ಲ. ಜನರಿಗೆ ಗೊತ್ತಿದೆ. ದೇಶವನ್ನ ಯಾರು ಜೋಡೋ ಮಾಡಿದಾರೆ, ಯಾರು ತೋಡೋ ಮಾಡಿದ್ದಾರೆ ಎಂದು.
ಪಿಎಫ್ ಐ ಬ್ಯಾನ್ ಎಲೆಕ್ಷನ್ ಗಿಮಿಕ್ ಎಂಬ ಬಿ.ಕೆ.ಹರಿಪ್ರಸಾದ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅವರು ಬೇರೆ ಏನನ್ನೂ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ಇಷ್ಟು ವರ್ಷ ವಿದ್ವಂಸಕ ಕೃತ್ಯ ನಮ್ಮೆದುರಲ್ಲೇ ನಡೆದಿದೆ. ಕೊಲೆ, ಭಯೋತ್ಪಾದಕ ಚಟುವಟಿಕೆ ನಡೆದಿವೆ. ಇದೇ ಕಾಂಗ್ರೆಸ್ ವಿಧಾನಸಭೆ ಒಳಗಡೆ ಹೊರಗಡೆ ಪಿಎಪ್ ಐ ಬ್ಯಾನ್ ಮಾಡಿ ಎಂದಿದ್ದರು. ಈಗ ಬ್ಯಾನ್ ಮಾಡಿದಾಗ ಹೀಗೆ ಮಾತನಾಡಿದರೆ ಏನು ಯಾವುದೇ ಅರ್ಥವಿಲ್ಲ ಎಂದರು.