ಈ ಮಳೆಗಾಲಕ್ಕೆ ಪ್ರವಾಹ ಭೀತಿ ಇಲ್ಲ

h31-Devinagar
Published on

ಹುಬ್ಬಳ್ಳಿ: ಕಳೆದ ಮಳೆಗಾಲದಲ್ಲಿ ಉಣಕಲ್ಲ ಕೆರೆ ಪ್ರವಾಹಕ್ಕೆ ರಾಜಕಾಲುವೆಯಲ್ಲಿನ 4 ಸೇತುವೆಗಳು ನೆಲಸಮಗೊಂಡು ಸುತ್ತಲಿನ ಪ್ರದೇಶಕ್ಕೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿತ್ತು. ಈಗ ಮಳೆಗಾಲ ಮತ್ತೆ ಕಾಲಿಟ್ಟಿದೆ.

ಕೆರೆ ನೀರಿನ ಪ್ರವಾಹದ ರಭಸಕ್ಕೆ ಉಣಕಲ್ಲನಿಂದ ಗಾಮನಗಟ್ಟಿಗೆ ಹೋಗುವ, ಲಿಂಗರಾಜ ನಗರದ ಉದ್ಯಾನ ಬಳಿಯ ಸೇತುವೆ, ಬನಶಂಕರಿ ಬಡಾವಣೆ ಬಳಿಯ ಹಾಗೂ ದೇವಿನಗರದ ಸೇತುವೆಗಳು ಕಿತ್ತು ಹೋಗಿದ್ದವು. ಇದರಿಂದ ಸುತ್ತಲಿನ ಮನೆಗಳಿಗೆ ನೀರು ನುಗ್ಗಿ, ಸಾವಿರಾರು ಜನರು ತೊಂದರೆಗೀಡಾಗಿದ್ದರು.

ನಾಲಾ ಅಕ್ಕಪಕ್ಕದ ಮನೆಯಲ್ಲಿನ ವಸ್ತುಗಳು ಪ್ರವಾಹದ ನೀರಿನಲ್ಲಿ ತೇಲಿ ಹೋಗಿದ್ದವು. ವಿಷ ಜಂತುಗಳು ಮನೆಯೊಳಗೆ ಹೊಕ್ಕಿದ್ದವು. ಅಲ್ಲಿನ ಜನರು ತಿಂಗಳುಗಟ್ಟಲೇ ಸರಿಯಾಗಿ ಊಟ, ನಿದ್ರೆ ಇಲ್ಲದೆ ಕಷ್ಟ ಅನುಭವಿಸಿದ್ದರು.

ಈ ವರ್ಷದ ಮಳೆಗೆ ದುರ್ಘಟನೆ ಮರುಕಳಿಸಬಾರದೆಂದು ಮಹಾನಗರ ಪಾಲಿಕೆ 8.38 ಕೋಟಿ ರೂ. ವೆಚ್ಚದಲ್ಲಿ ಈ ನಾಲ್ಕೂ ಸೇತುವೆಗಳ ಮರು ನಿರ್ವಣಕ್ಕೆ ಮುಂದಾಗಿತ್ತು. ಕಳೆದ ಫೆಬ್ರವರಿಯಲ್ಲಿ ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿತ್ತು. ಈ ಮಧ್ಯೆ ಲಾಕ್​ಡೌನ್​ನಿಂದಾಗಿ ಸುಮಾರು ಎರಡೂವರೆ ತಿಂಗಳುಗಳಿಂದ ಕಾಮಗಾರಿ ಸ್ಥಗಿತಗೊಂಡಿತು. ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಕಾಮಗಾರಿಗೆ ಬಂದಿದ್ದ ಬಿಹಾರ ಮೂಲದ ವಲಸೆ ಕಾರ್ವಿುಕರು ತವರು ರಾಜ್ಯಕ್ಕೆ ತೆರಳಿದರು. ಪರ್ಯಾಯ ಕಾರ್ವಿುಕರನ್ನು ಕರೆತಂದು ಸೇತುವೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರರು ಪ್ರಾರಂಭಿಸಿದ್ದಾರೆ. ದೇವಿನಗರ ಹೊರತುಪಡಿಸಿ ಇನ್ನುಳಿದ 3 ಸ್ಥಳದಲ್ಲಿ ನಿರ್ವಣಗೊಳ್ಳುತ್ತಿರುವ ಸೇತುವೆ ಕಾಮಗಾರಿ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಸ್ಲ್ಯಾಬ್ ಹಂತಕ್ಕೆ ಬಂದಿರುವ ಈ ಸೇತುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಬಹುದು. ತಾಂತ್ರಿಕ ಕಾರಣಗಳಿಂದ ತಡವಾಗಿದ್ದ ದೇವಿನಗರದ ಸೇತುವೆ ನಿರ್ಮಾಣ ಕಾಮಗಾರಿಯೂ ಪ್ರಾರಂಭಗೊಂಡಿದ್ದು, ಜೂನ್ ಮಾಸಾಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ಎಸ್.ಎಸ್. ಪೊಲೀಸ್ ಪಾಟೀಲ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ರಾಜಕಾಲುವೆಯಲ್ಲಿ ನಿರ್ವಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಪೂರ್ಣಗೊಂಡಲ್ಲಿ ಯಾವುದೇ ರೀತಿ ಮಳೆ ಬಂದರೂ ಉಣಕಲ್ಲ ಕೆರೆಯಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತದೆ.

ದೇವಿನಗರದ ಸೇತುವೆ ಕಾಮಗಾರಿಯನ್ನು ಹಗಲಿರುಳು ನಡೆಸುತ್ತಿದ್ದೇವೆ. ಇದಕ್ಕಾಗಿ 2 ಶಿಫ್ಟ್​ನಲ್ಲಿ ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. 1 ತಿಂಗಳೊಳಗೆ ಸೇತುವೆ ಸಿದ್ಧಗೊಳ್ಳುತ್ತದೆ. | ಎಸ್.ಎಸ್. ಪೊಲೀಸ್ ಪಾಟೀಲ, ಗುತ್ತಿಗೆದಾರ ಹದಿನೈದು ದಿನದಲ್ಲಿ 3 ಸೇತುವೆಗಳು ಪೂರ್ಣಗೊಳ್ಳಲಿವೆ. ದೇವಿನಗರದ ಸೇತುವೆಯು ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಅಲ್ಲಿನ ಸೇತುವೆ ನಿರ್ವಣಕ್ಕೆ ಇದ್ದ ಅಡಚಣೆಗಳನ್ನು ನಿವಾರಿಸಲಾಗಿದೆ. | ಡಾ. ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net