ಈ ಬಾರಿ ಆಸ್ತಿ ತೆರಿಗೆ ಏರಿಕೆ ಇಲ್ಲ!

HDMC edit
Published on

ಹುಬ್ಬಳ್ಳಿ: ಮಹಾಮಾರಿ ಕರೊನಾ ಸೋಂಕು, ಲಾಕ್ ಡೌನ್​ನಿಂದ ತಲ್ಲಣಿಸಿರುವ ಅವಳಿ ನಗರದ ಜನತೆಗೆ ತುಸು ಸಮಾಧಾನದ ಸಂಗತಿ. ಹು-ಧಾ ಮಹಾನಗರ ಪಾಲಿಕೆ 2020-21ನೇ ಸಾಲಿನ ಆಸ್ತಿ ತೆರಿಗೆ ದರದಲ್ಲಿ ಏರಿಕೆ ಮಾಡುವುದಿಲ್ಲವಂತೆ.

2020-21ನೇ ಆರ್ಥಿಕ ವರ್ಷ ಆರಂಭ (ಏ. 1ರಿಂದ)ಗೊಂಡಿದೆ. ಸ್ವಯಂ ಘೊಷಿತ ಆಸ್ತಿ ತೆರಿಗೆ ಪದ್ಧತಿಯ ನಿಯಮದಂತೆ ಪ್ರತಿ 3 ವರ್ಷಕ್ಕೊಮ್ಮೆ ಏರಿಕೆ ಕಡ್ಡಾಯ. ಶೇ. 15ರಿಂದ 30ರ ವರೆಗೆ ಏರಿಕೆ ಮಾಡುವುದನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳ ವಿವೇಚನೆ ಬಿಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಥವಾ ಇವರ ಅಧಿಕಾರಾವಧಿ ಪೂರ್ಣಗೊಂಡಲ್ಲಿ ಆಡಳಿತಾಧಿಕಾರಿಯವರು ಏರಿಕೆ ಪ್ರಮಾಣವನ್ನು ನಿರ್ಧರಿಸುತ್ತಾರೆ.

ಹು-ಧಾ ಮಹಾನಗರ ಪಾಲಿಕೆ 2017-18ರಲ್ಲಿ ಕೊನೆಯ ಬಾರಿ ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಿತ್ತು. ನಿಯಮದಂತೆ ಈ ಬಾರಿ ಪರಿಷ್ಕರಣೆ, ಅಂದರೆ ಏರಿಕೆ ಮಾಡಬೇಕಿತ್ತು. ಆದರೆ, ಲಾಕ್​ಡೌನ್ ಘೊಷಣೆಯಾಗಿರುವುದರಿಂದ ಅವಳಿ ನಗರವೇ ಸ್ತಬ್ಧವಾಗಿದೆ. ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ವ್ಯಾಪಾರ-ವಹಿವಾಟು, ವಾಣಿಜ್ಯ ಚಟುವಟಿಕೆ ನಿಂತು ಹೋಗಿದೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆ ದರ ಏರಿಕೆ ಮಾಡದಿರುವುದೇ ಸೂಕ್ತವೆಂಬ ನಿರ್ಧಾರಕ್ಕೆ ಪಾಲಿಕೆ ಬಂದಿದೆ. ವಸತಿ ಕಟ್ಟಡಗಳಿಗೆ ಶೇ. 15ರಷ್ಟು ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ. 25ರಿಂದ 30 ಏರಿಕೆ ನಿಶ್ಚಿತವಾಗಿತ್ತು. ಹೀಗೆ ಏರಿಕೆ ಆಗಿದ್ದರೆ ಪಾಲಿಕೆ 9ರಿಂದ 13 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುತ್ತಿತ್ತು.

ಅವಳಿ ನಗರದಲ್ಲಿ ವಸತಿ, ವಾಣಿಜ್ಯ, ವಸತಿ ಮತ್ತು ವಾಣಿಜ್ಯ ಕಂಬೈನ್ಡ್ ಹಾಗೂ ಖಾಲಿ ಜಾಗ ಸೇರಿ ಸುಮಾರು 2.69 ಲಕ್ಷ ಆಸ್ತಿಗಳಿವೆ. ಪಾಲಿಕೆಗೆ ಬಹು ದೊಡ್ಡ ಆದಾಯ ಮೂಲ ಆಸ್ತಿ ತೆರಿಗೆ. 2019-20ನೇ ಸಾಲಿನಲ್ಲಿ 56.42 ಕೋಟಿ ರೂ. ಬೇಡಿಕೆ ಹಾಗೂ ಹಿಂದಿನ ಬಾಕಿ 16.54 ಕೋ. ರೂ. ಸೇರಿ 72.97 ಕೋ. ರೂ. ವಸೂಲಾಗಬೇಕಿತ್ತು. ಮಾರ್ಚ್ 5ರ ವರೆಗೆ ಪಾಲಿಕೆ ಅಧಿಕಾರಿಗಳು ಸುಮಾರು 55.35 ಕೋಟಿ ರೂ. ವಸೂಲು ಮಾಡಿದ್ದರು. ಮಾರ್ಚ್ ತಿಂಗಳಲ್ಲಿ ವಸೂಲಾತಿ ಅಭಿಯಾನ ನಡೆಸಬೇಕಿತ್ತು. ತೆರಿಗೆ ಬಾಕಿ ಉಳಿಸಿಕೊಂಡವರ ಕಟ್ಟಡಗಳ ಮುಂದೆ ತಮಟೆ ಬಾರಿಸುವ, ನೀರಿನ ಸಂಪರ್ಕ ಕಡಿತಗೊಳಿಸುವ, ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿಯುವ ಕ್ರಮಗಳು ಹಿಂದೆಲ್ಲ ಜರುಗಿದ್ದವು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಂಥ ಅಭಿಯಾನಗಳು ಈ ಬಾರಿ ನಡೆಯಲಿಲ್ಲ.

ರಿಯಾಯಿತಿ ಅವಧಿ ವಿಸ್ತರಣೆ

ಆಸ್ತಿ ತೆರಿಗೆಯ ಮೇಲೆ ಶೇ. 5ರಷ್ಟು ರಿಯಾಯಿತಿ ಪಡೆಯಲು ಏಪ್ರಿಲ್ 30ರೊಳಗೆ ಪಾವತಿಸಬೇಕಿತ್ತು. ಇದೀಗ ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿಯನ್ನು ಮೇ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ. ಅವಳಿ ನಗರದ ಶೇ. 45ರಿಂದ 55ರಷ್ಟು ಆಸ್ತಿ ಧಾರಕರು ರಿಯಾಯಿತಿ ಅವಧಿಯಲ್ಲಿಯೇ ಆಸ್ತಿ ತೆರಿಗೆ ಪಾವತಿಸುತ್ತ ಬಂದಿದ್ದಾರೆ. ಯಾಕೆಂದರೆ, ರಿಯಾಯಿತಿ ಹಾಗೂ ರಿಯಾಯಿತಿ ರಹಿತ ಅವಧಿ ಮೀರಿದ ಬಳಿಕ ಪ್ರತಿ ತಿಂಗಳು ಶೇ. 2ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.

2020-21ನೇ ಸಾಲಿನಲ್ಲಿ ಆಸ್ತಿ ತೆರಿಗೆ ದರ ಏರಿಕೆ ಮಾಡಬೇಕಿತ್ತು. ಈ ಬಾರಿ ಏರಿಕೆ ಮಾಡಬಾರದೆಂದು ಹಾಗೂ ಈಗಿರುವ ದರದಲ್ಲಿಯೇ ಆಕರಣೆ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ಲಿಖಿತ ಆದೇಶ ಬರಲಿದೆ. | ಡಾ. ಸುರೇಶ ಇಟ್ನಾಳ, ಆಯುಕ್ತ, ಹುಧಾಮಪಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net