ಈ ಪೆಡ್ಲರ್‌ಗೆ ಇನ್ನೂ ಒಂದು ವರ್ಷ ಜಾಮೀನು ಸಿಗಲ್ವಂತೆ!

CCB
Published on

ಬೆಂಗಳೂರು : ಮಾದಕ ದ್ರವ್ಯ ಮಾಫಿಯಾ ವಿರುದ್ಧ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಂಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಪೆಡ್ಲರ್ ಆಗಿದ್ದ ರೌಡಿ ವಿರುದ್ಧ ಅಕ್ರಮ ಮಾದಕ ವಸ್ತು ಸಾಗಾಣಿಕೆ ತಡೆ ಕಾಯ್ದೆ (ಪಿಐಟಿ ಎನ್‌ಡಿಪಿಎಸ್ ಕಾಯ್ದೆ-1988) ಜಾರಿಗೊಳಿಸಿದ್ದಾರೆ.

ನಗರದಲ್ಲಿ ಮೊದಲ ಬಾರಿಗೆ ರೌಡಿ ವಿರುದ್ಧ ಪಿಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಹಿಂದೆ ನೈಜೀರಿಯಾ ಪೆಡ್ಲರ್‌ನನ್ನು ಬಂಧಿಸಿ ಸಿಸಿಬಿ ಪೊಲೀಸರು ಜೈಲಿಗೆ ಕಳುಹಿಸಿದ್ದರು. 1 ವರ್ಷಗಳ ಕಾಲ ಆರೋಪಿಗೆ ಜಾಮೀನು ಸಿಗುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪಿಳ್ಳಣ್ಣ ಗಾರ್ಡನ್‌ನ ಸೈಯದ್ ನಜೀಮ್ ಬಂಧಿತ. 2009ರಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ. ಈತನ ವಿರುದ್ಧ 6 ಪ್ರಕರಣಗಳು ದಾಖಲಾಗಿವೆ. ಗಾಂಜಾ ಕೃತ್ಯದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಆರೋಪಿ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ಹಳೇ ಚಾಳಿಯನ್ನು ಮುಂದುವರೆಸುತ್ತಿದ್ದ. ಇದೇ ಆರೋಪದ ಮೇಲೆ ಆರೋಪಿ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು.

ಇತ್ತೀಚೆಗೆ ಸೈಯದ್ ನಜೀಮ್ ವಿರುದ್ಧ ಮಾದಕ ವಸ್ತು ಸಾಗಾಣಿಕೆ ನಿಯಂತ್ರಣ ಕಾಯ್ದೆ (ಪಿಐಟಿ) ಯಡಿ ಪ್ರಕರಣ ದಾಖಲಿಸಲು ಅನುಮತಿ ಕೋರಿ ಕೆ.ಜಿ.ಹಳ್ಳಿ ಪೊಲೀಸರು ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ವರದಿಗೆ ಸಮ್ಮತಿ ಸೂಚಿಸಿದ ಕಮಲ್ ಪಂತ್, ಆರೋಪಿ ವಿರುದ್ಧ ಪಿಐಟಿ ಕಾಯ್ದೆ ಪ್ರಯೋಗಕ್ಕೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net