

ಮೈಸೂರು: ಚಂದ್ರಯಾನ-3 ಯೋಜನೆಯ ನೌಕೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಹಿನ್ನೆಲೆಯಲ್ಲಿ ಕುವೆಂಪುನಗರದಲ್ಲಿ ತಪೋನಂದನ ಉದ್ಯಾನ ಸಮೂಹದ ವತಿಯಿಂದ ವಿಜಯೋತ್ಸವವನ್ನು ಬುಧವಾರ ಸಂಜೆ ಆಚರಿಸಲಾಯಿತು. ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.
ಸ್ಪಂದನ ಅಧ್ಯಕ್ಷ ಎಂ.ಜಯಶಂಕರ್ ಮಾತನಾಡಿ, ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿ ಇತಿಹಾಸ ಬರೆದಿದ್ದಾರೆ. ಇದು ಭಾರತದ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿ ಆಗಿದೆ. ಸುವರ್ಣಾಕ್ಷರದಲ್ಲಿ ಬರೆದಿಡುವ ಸಾಧನೆ ಇದಾಗಿದೆ ಎಂದು ಹೇಳಿದರು.
ಸ್ಥಳೀಯ ಮುಖಂಡ ಶ್ರೀನಾಥ್ ಸಾಮಗ ಮಾತನಾಡಿ, ಮುಂಚಿನ 2 ತಪ್ಪುಗಳನ್ನು ತಿದ್ದಿಕೊಂಡು ಚಂದ್ರಯಾನ -3 ಯೋಜನೆಯನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲಾಗಿದೆ. ಇದರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳ ನಿರಂತರ ಪ್ರಯತ್ನ, ಪ್ರತಿಯೊಬ್ಬ ಭಾರತೀಯರ ವಿಶ್ವಾಸ ಮತ್ತು ನಂಬಿಕೆ ಮುಖ್ಯ ಕಾರಣವಾಗಿದೆ ಎಂದರು. ವಿಜಯೋತ್ಸವದಲ್ಲಿ ತಪೋನಂದನದ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಭಾಗವಹಿಸಿದ್ದರು
ಹಿರಿಯ ನಾಗರಿಕರಾದ ಲೋಕೇಶ್, ದರ್ಶನ್, ಪ್ರತಾಪ್ ಸ್ವಾಮಿ, ಲಕ್ಷ್ಮಣ್, ನರಸಿಂಹಮೂರ್ತಿ, ನಾಗರಾಜ್ ಇತರರು ಇದ್ದರು.