

ವಿಜಯಪುರ: ಚಂದಿರನ ದಕ್ಷಿಣ ಧ್ರುವದಲ್ಲಿ ಇಸ್ರೋ ನೌಕೆ ತ್ರಿವಿಕ್ರಮ ಸಾಫ್ಟ್ ಲ್ಯಾಂಡಿಂಗ್ ಮೂಲಕ ಸಾಧನೆ ಮಾಡುತ್ತಿದ್ದಂತೆ ಐತಿಹಾಸಿಕ ಗುಮ್ಮಟದ ಗ್ಯಾಲರಿಯಲ್ಲಿ ಪಟಾಕಿಯ ಸದ್ದು ಪ್ರತಿಧ್ವನಿಸಿತು.
ಬುಧವಾರ ಸಂಜೆ ತ್ರಿವಿಕ್ರಮ ನೌಕೆ ಚಂದಿರನನ್ನು ಚುಂಬಿಸುತ್ತಿದ್ದಂತೆ ಜನ ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದರು. ಚಪ್ಪಾಳೆ ತಟ್ಟಿ ಇಸ್ರೋ ಸಾಧನೆಗೆ ಅಭಿನಂದಿಸಿದರು. ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಕೆಲವರು ಪಟಾಕಿ ಸಿಡಿಸಿ ತಮ್ಮ ಅಭಿಮಾನ ಮೆರೆದರೆ ಇನ್ನೂ ಕೆಲವರು ಚಹಾ-ಚೂಡಾ, ಶಿರಾ-ಉಪ್ಪಿಟ್ಟು ಮತ್ತಿತರ ಸಿಹಿ ಪದಾರ್ಥ ಹಂಚಿ ಹೆಮ್ಮೆ ವ್ಯಕ್ತಪಡಿಸಿದರು.
ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ‘ಲೈವ್ ವೀಕ್ಷಣೆ’ಗೆ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಬಡಾವಣೆಗಳಲ್ಲಿ ಎಲ್‌ಇಡಿ ಮೂಲಕ ಬಹಿರಂಗ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮೊಬೈಲ್, ಕಂಪ್ಯೂಟರ್, ಟಿವಿ ಹೀಗೆ ಅನೇಕ ಸಾಧನಗಳ ಸಹಾಯದೊಂದಿಗೆ ಜನ ನೇರ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದರು. ವಿಜ್ಞಾನಿಗಳ ಚಲನವಲನಗಳು, ನೌಕೆಯ ಕಾರ್ಯವೈಖರಿ, ಕಾಮೆಂಟರಿ ಸೇರಿದಂತೆ ಇಸ್ರೋದ ಚಟುವಟಿಕೆಗಳನ್ನು ಕಂಡು ರೋಮಾಂಚನಗೊಂಡರು. ಚಂದ್ರನ ನೆಲದಲ್ಲಿ ನೌಕೆ ಪದಾರ್ಪಣೆ ಮಾಡುತ್ತಿದ್ದಂತೆ ಕುಣಿದು ಕುಪ್ಪಳಿಸಿದರು.
ವಿದ್ಯಾರ್ಥಿಗಳು ಭಾರತದ ಬಾವುಟ ಹಿಡಿದು ಜಯಘೋಷ ಕೂಗಿದರೆ, ಯುವ ಪಡೆ ಫೇಸ್‌ಬುಕ್ ಮತ್ತು ವಾಟ್ಸಾಪ್ ಸ್ಟೇಟಸ್ ಇರಿಸಿ ತಮ್ಮ ಅಭಿಮಾನ ತೋರಿದರು. ಸಾಮಾಜಿಕ ಜಾಲತಾಣಗಳೆಲ್ಲ ‘ಇಸ್ರೋಮಯ’ವಾಗಿದ್ದವು. ತ್ರಿವಣ ಧ್ವಜ ಹಾಗೂ ತ್ರಿವಿಕ್ರಮನ ಚಿತ್ರಗಳು ರಾರಾಜಿಸಿದವು. ವಿಜ್ಞಾನಿಗಳ ಸಾಧನೆ ಬಗ್ಗೆ ಗುಣಗಾನ ನಡೆಯಿತು. ವಿಶ್ವ ಮಟ್ಟದಲ್ಲಿ ಭಾರತದ ಸಾಧನೆಯನ್ನು ನೆನೆದು ಪುಳಕಿತಗೊಂಡರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬೃಹತ್ ಎಲ್‌ಇಡಿ ಅಳವಡಿಸಿ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಾಚರಣೆ ಯಶಸ್ವಿಯಾಗುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಿಸಿದರು. ‘ಭಾರತ ಮಾತಾ ಕೀ ಜೈ….. ಮೇರಾ ಭಾರತ ಮಹಾನ್’ ಎಂಬ ಘೋಷಣೆ ಮೊಳಗಿಸಿ, ಪಟಾಕಿ ಸಿಡಿಸಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ವಿಕ್ರಮ್ ಲ್ಯಾಂಡರ್ ಯಶಸ್ವಿ ಸಾಧನೆಯ ಹಿಂದೆ ಪ್ರಧಾನಿ ಮೋದಿ ಅವರ ಪರಿಶ್ರಮ ಹಾಗೂ ಸಮಸ್ತ ಭಾರತೀಯರ ಪ್ರಾರ್ಥನೆ ಅಡಗಿದೆ. ಇಸ್ರೋ ವಿಜ್ಞಾನಿಗಳು ಇಡೀ ದೇಶದ ಪ್ರತಿಯೊಬ್ಬ ಪ್ರಜೆ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಅವರ ಪರಿಶ್ರಮಕ್ಕೆ ಇಂದು ಯಶಸ್ಸು ದೊರಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿದಿರುವುದು ಅಭಿಮಾನ ಹಾಗೂ ಹೆಮ್ಮೆಯ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಮ್ಮೆ ಸಾಧನೆಯ ಮೈಲಿಗಲ್ಲು ಸ್ಥಾಪಿಸಿದೆ. ಚಂದ್ರನ ಬಗ್ಗೆ ಇನ್ನಷ್ಟು ಅಧ್ಯಯನ, ಸಂಶೋಧನೆಗೆ ಭಾರತದ ಈ ಯಾನ ಮುನ್ನುಡಿ ಬರೆಯಲಿದೆ, ಇದು ಅಭಿಮಾನದ ಸಂಗತಿ ಎಂದರು.
ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಮುಖಂಡರಾದ ಪ್ರಕಾಶ ಅಕ್ಕಲಕೋಟ, ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಉಮೇಶ ಕೋಳಕೂರ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗುರ, ಪಾಲಿಕೆ ಸದಸ್ಯರಾದ ಮಳುಗೌಡ ಪಾಟೀಲ, ಭೀಮಾಶಂಕರ ಹದನೂರ, ರಾಹುಲ್ ಜಾಧವ, ವಿಠ್ಠಲ ಹೊಸಪೇಟ, ವಿವೇಕಾನಂದ ಡಬ್ಬಿ, ವಿಜಯ ಜೋಶಿ, ಸುವರ್ಣಾ ಕುರ್ಲೇ, ಶಾಂತಾ ಉತ್ಲಾಸ್ಕರ, ಸುಶ್ಮಿತಾ ಹೊಂಡಕರ, ಸುಮಂಗಲಾ ಕೋಟಿ, ಮಹೇಶ ಒಡೆಯರ, ಭರತ ಕೋಳೂರ, ಕೃಷ್ಣಾ ಗುನಾಳಕರ, ರಾಜೇಶ ತವಸೆ, ಸಂದೀಪ ಪಾಟೀಲ ಮತ್ತಿತರರಿದ್ದರು.